ವ್ಯಂಗ್ಯ ಚಿತ್ರಕ್ಕೆ ವಿರೋಧ: ಸಂವಿಧಾನಕ್ಕೂ, ಅಂಬೇಡ್ಕರ್ ಅವರಿಗೂ ಅಪಚಾರ

ನಮ್ಮ ಸಂಸತ್ತಿನ ಮೊದಲ ಅಧಿವೇಶನದ ವಜ್ರಮಹೋತ್ಸವದ ಆಚರಣೆಯ ಮುನ್ನಾ ದಿನವೇ, ನಮ್ಮ ಸಂವಿಧಾನಕರ್ತರು ಸಭೆ ಸೇರಿದ್ದ ಸಂಸತ್ತಿನ ಸಭಾಂಗಣದಲ್ಲಿಯೇ, ಅದೇ ಸಂಸತ್ತಿನ ಕಲಾಪಕ್ಕೆ ನೆಹರೂ ಹಾಗೂ ಬಾಬಾ ಸಾಹೆಬ್ ಅಂಬೇಡ್ಕರ್ ಅವರನ್ನೊಳಗೊಂಡ ವ್ಯಂಗ್ಯಚಿತ್ರದ ಹೆಸರಿನಲ್ಲಿ ಅಡ್ಡಿಯುಂಟು ಮಾಡಿದ ಪ್ರಸಂಗವು ನಡೆದಿರುವುದು ನಿಜಕ್ಕೂ ಒಂದು ವಿಪರ್ಯಾಸವೇ ಸರಿ. ಆ ಹಳೆಯ ವ್ಯಂಗ್ಯ ಚಿತ್ರದಿಂದ ನೆಹರೂ ಅವರಿಗಾಗಲೀ, ಬಾಬಾ ಸಾಹೆಬ್ ಅಂಬೇಡ್ಕರ್ ಅವರಿಗಾಗಲೀ ಯಾವುದೇ ರೀತಿಯ ಅಪಮಾನವಾಗಿದೆಯೆಂದು ನನಗನಿಸುವುದಿಲ್ಲ. ಬದಲಿಗೆ, ಅದನ್ನು ವಿರೋಧಿಸುವವರಿಂದಲೇ ನಮ್ಮ ಸಂವಿಧಾನದ ಆಶಯಗಳಿಗೂ, ಅಂಬೇಡ್ಕರ್ ಅವರ ದೂರದರ್ಶಿತ್ವಕ್ಕೂ ಅನ್ಯಾಯವಾಗಿದೆಯೆಂದು ಹೇಳಲೇಬೇಕಾಗುತ್ತದೆ; ನಮ್ಮೆಲ್ಲರಿಗೂ ಸಮಾನತೆಯನ್ನೂ, ಸ್ವಾತಂತ್ರ್ಯವನ್ನೂ, ಎಲ್ಲಾ ವಿಧದ ನಾಗರಿಕ ಹಕ್ಕುಗಳನ್ನೂ ಒದಗಿಸಿರುವ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ನಮ್ಮ ಸಂವಿಧಾನಕ್ಕೂ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅದನ್ನು ರಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದ ಬಾಬಾ ಸಾಹೆಬ್ ಅಂಬೇಡ್ಕರ್ ಅವರಿಗೂ ಈ ಘಟನೆಯಿಂದ ಅಪಮಾನವಾಗಿದೆಯೆಂದೇ ಹೇಳಬೇಕಾಗುತ್ತದೆ.

ಕೆಲ ಸಂಸತ್ ಸದಸ್ಯರನ್ನು ಕೆರಳಿಸಿದ ಆ ವ್ಯಂಗ್ಯ ಚಿತ್ರವನ್ನು 1949ರಲ್ಲಿ ಶಂಕರ ಪಿಳ್ಳೆ ರಚಿಸಿದ್ದರು. ಆ ವ್ಯಂಗ್ಯಚಿತ್ರದೊಳಗಿದ್ದ ನೆಹರೂ ಮತ್ತು ಬಾಬಾ ಸಾಹೆಬ್ ಅಂಬೇಡ್ಕರ್ ಅವರಿಬ್ಬರೂ ಭಾರತ ರತ್ನರಾಗಿದ್ದರೆ, ಶಂಕರ್ ನಮ್ಮ ದೇಶದ ಎರಡನೇ ಅತ್ಯುಚ್ಛ ಗೌರವವಾದ ಪದ್ಮವಿಭೂಷಣ ಪುರಸ್ಕೄತರು, ಭಾರತದಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳ ಪಿತಾಮಹರೆಂದೇ ಪ್ರಸಿದ್ಧರು.

ಅಷ್ಟಕ್ಕೂ ಆ ವ್ಯಂಗ್ಯಚಿತ್ರದಲ್ಲಿ ಏನಿದೆ? ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯು ಸಿದ್ಧ ಪಡಿಸಿದ ಹನ್ನೊಂದನೇ ತರಗತಿಯ ರಾಜಕೀಯ ಶಾಸ್ತ್ರದ ‘ಭಾರತೀಯ ಸಂವಿಧಾನದ ಅನುಷ್ಠಾನ’ ಎಂಬ ಹೆಸರಿನ ಪಠ್ಯ ಪುಸ್ತಕದ ಮೊದಲ ಅಧ್ಯಾಯದ 18ನೇ ಪುಟದಲ್ಲಿ ಈ ವ್ಯಂಗ್ಯಚಿತ್ರವನ್ನು ಅಳವಡಿಸಲಾಗಿದೆ.[ಪೂರ್ಣ ಪಠ್ಯಪುಸ್ತಕ ಇಲ್ಲಿ ಲಭ್ಯವಿದೆ http://upscportal.com/civilservices/ncert-books/class-xi-indian-constitution-at-work-political-science].

ಆ ವ್ಯಂಗ್ಯ ಚಿತ್ರದಲ್ಲಿ ಓಟದ ಸ್ಪರ್ಧೆಯ ಸನ್ನಿವೇಶವು ಚಿತ್ರಿತವಾಗಿದ್ದು, ಸಂವಿಧಾನ ರಚನಾ ಸಮಿತಿಯನ್ನು ನಿಧಾನವಾಗಿ ಓಡುತ್ತಿರುವ ಬಸವನ ಹುಳುವಿನಂತೆ ತೋರಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅದರ ಮೇಲೆ ಕುಳಿತು ಚಾಟಿ ಬೀಸುತ್ತಿದ್ದರೆ, ಪ್ರಧಾನಿ ನೆಹರೂ ಅದರ ಹಿಂದೆ ನಿಂತು ತಾವೂ ಚಾಟಿ ಬೀಸುತ್ತಿದ್ದಾರೆ. ಅಂದರೆ, ನಿಧಾನವಾಗಿ ಸಾಗುತ್ತಿದ್ದ ಸಂವಿಧಾನ ರಚನೆಯ ಕೆಲಸವನ್ನು ತ್ವರಿತಗೊಳಿಸುವಂತೆ ಈ ಇಬ್ಬರು ನಾಯಕರೂ ಪ್ರಚೋದಿಸುತ್ತಿರುವಂತೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಲಾಗಿದೆ. ಸಂವಿಧಾನ ರಚನೆಯನ್ನು ಕಾತರದಿಂದ ಕಾಯುತ್ತಿದ್ದ ದೇಶದ ಜನರನ್ನು ಸ್ಪರ್ಧೆಯ ಪ್ರೇಕ್ಷಕರಂತೆ ಚಿತ್ರಿಸಲಾಗಿದ್ದು, ಅವರೂ, ಈ ಮಹಾನ್ ನಾಯಕರಂತೆಯೇ, ಸಂವಿಧಾನ ರಚನೆಯ ಕೆಲಸವು ಬೇಗನೇ ಮುಗಿಯಲಿ ಎಂದು ಹಾರೈಸುತ್ತಿರುವಂತಿದೆ. ಇದರಲ್ಲಿ ನೆಹರೂ ಅಥವಾ ಅಂಬೇಡ್ಕರ್ ಅವರಿಗೆ ಅಪಮಾನವಾಗುವಂತದ್ದು ಏನಿದೆ? ಬದಲಿಗೆ, ಸಂವಿಧಾನ ರಚನೆಯ ಕೆಲಸವನ್ನು ಆದಷ್ಟು ತ್ವರಿತಗೊಳಿಸುವುದಕ್ಕೆ ಅವರೀರ್ವರ ಶ್ರಮವನ್ನು ಸೂಚಿಸುತ್ತಾ, ಅವರನ್ನು ಹೊಗಳುವಂತಿದೆ. ಸುತ್ತಲೂ ಸೇರಿರುವ ದೇಶದ ಜನರೂ ಅದಕ್ಕೆ ಸಮ್ಮತಿಸಿದಂತಿದೆ.

ಈ ವ್ಯಂಗ್ಯಚಿತ್ರದ ಕೆಳಗೆ ವಿದ್ಯಾರ್ಥಿಗಳಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ: ಬಸವನ ಹುಳುವಿನ ವೇಗದಲ್ಲಿ ಸಾಗಿದ ಸಂವಿಧಾನ ರಚನೆಯ ಬಗ್ಗೆ ವ್ಯಂಗ್ಯಚಿತ್ರಕಾರನ ಕುಂಚದಲ್ಲಿ ಮೂಡಿದ ಅಭಿವ್ಯಕ್ತಿ. ಸಂವಿಧಾನ ರಚನೆಗೆ ಸುಮಾರು ಮೂರು ವರ್ಷಗಳೇ ಹಿಡಿದವು. ವ್ಯಂಗ್ಯಚಿತ್ರಕಾರನು ಇದನ್ನೇ ವ್ಯಾಖ್ಯಾನಿಸಿದ್ದಾನೆಯೇ? ನಿಮ್ಮಅಭಿಪ್ರಾಯದಂತೆ, ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾ ಸಮಿತಿಗೆ ಅಷ್ಟೊಂದು ಸಮಯವು ಏಕೆ ಬೇಕಾಯಿತು?

ಇದಕ್ಕೆ ವಿವರಣೆಯೂ ಅಲ್ಲೇ ಇದೆ: ಸಂವಿಧಾನ ಸಭೆಯ ಸದಸ್ಯರು ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿದ್ದರೆಂಬ ಕಾರಣದಿಂದಲೇ ನಮ್ಮ ಸಂವಿಧಾನವು ಅಧಿಕಾರಯುತವಾಯಿತು. ಸಭೆಯ ಸದಸ್ಯರು ವಿವರವಾದ ಮಾತುಕತೆಗಳಿಗೂ, ವಿಚಾರಪ್ರದವಾದ ಚರ್ಚೆಗಳಿಗೂ ಅಪಾರವಾದ ಮಹತ್ವವನ್ನು ಕೊಟ್ಟಿದ್ದರು. ಅವರಾರೂ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಸುಮ್ಮಗೇ ಮುಂದೊತ್ತುತ್ತಿರಲಿಲ್ಲ, ಬದಲಾಗಿ, ತಮ್ಮ ನಿಲುವಿನ ಬಗ್ಗೆ ಇತರ ಸದಸ್ಯರಿಗೆ ತಾತ್ವಿಕವಾದ ವಿವರಣೆಗಳನ್ನು ನೀಡುತ್ತಿದ್ದರು….ಸಂವಿಧಾನದ ಪ್ರತಿಯೊಂದು ವಿಧಿಯನ್ನು ಕಠಿಣವಾದ ವಿಮರ್ಶೆಗಳಿಗೂ, ಚರ್ಚೆಗಳಿಗೂ ಒಡ್ಡಿದ ಸಂವಿಧಾನ ಸಭೆಯ ವಿಪುಲವಾದ ನಡವಳಿಗಳು ಜನಾಭಿಪ್ರಾಯಕ್ಕಿತ್ತ ಅತ್ಯುತ್ತಮವಾದ ಮನ್ನಣೆಯಾಗಿದ್ದವು. ಇವೆಲ್ಲಕ್ಕೂ ಸಾಕಷ್ಟು ಸಮಯ ಹಿಡಿದದ್ದರಿಂದಲೇ ಸಂವಿಧಾನ ರಚನೆಯು ಬಸವನ ಹುಳುವಿನಂತೆ ನಿಧಾನವಾಯಿತು: ಸಂವಿಧಾನ ಸಭೆಯು ಎರಡು ವರ್ಷ, ಹನ್ನೊಂದು ತಿಂಗಳ ಅವಧಿಯಲ್ಲಿ ನೂರ ಅರುವತ್ತಾರು ದಿನಗಳ ಕಾಲ ಸಭೆ ಸೇರಿತ್ತು ಹಾಗೂ ಈ ಸಭೆಗಳಿಗೆ ಮಾಧ್ಯಮಗಳು ಹಾಗೂ ಜನಸಾಮಾನ್ಯರಿಗೆ ಮುಕ್ತವಾದ ಪ್ರವೇಶವಿತ್ತು.

ಈ ಪಠ್ಯದಲ್ಲಿ ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗುವಂತಹ ವಿಚಾರವೇನಾದರೂ ಇದೆಯೇ? ಸಂವಿಧಾನ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಎಂಟು ದೊಡ್ಡ ಸಮಿತಿಗಳಿದ್ದವು. ಜವಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನ ಆಜಾದ್ ಅಥವಾ ಅಂಬೇಡ್ಕರ್ ಈ ಸಮಿತಿಗಳಿಗೆ ಅಧ್ಯಕ್ಷರಾಗಿದ್ದರು.ಇವರೆಲ್ಲರೂ ಹಲವು ವಿಚಾರಗಳಲ್ಲಿ ತಮ್ಮೊಳಗೆ ಒಮ್ಮತಾಭಿಪ್ರಾಯವಿದ್ದ ನಾಯಕರೇನೂ ಆಗಿರಲಿಲ್ಲ. ಅಂಬೇಡ್ಕರ್ ಅವರು ಕಾಂಗ್ರೆಸ್ ಹಾಗೂ ಗಾಂಧಿಯವರ ಕಟು ಟೀಕಾಕಾರರಾಗಿದ್ದರು ಮತ್ತು ಪರಿಶಿಷ್ಟ ವರ್ಗದವರ ಏಳಿಗೆಗಾಗಿ ಅವರು ಸಾಕಷ್ಟು ಶ್ರಮಿಸುತ್ತಿಲ್ಲವೆಂದು ದೂರುತ್ತಿದ್ದರು. ಪಟೇಲ್ ಹಾಗೂ ನೆಹರೂ ಅವರ ನಡುವೆಯೂ ಹಲವು ವಿಚಾರಗಳಲ್ಲಿ ಭಿನ್ನಮತವಿತ್ತು. ಹಾಗಿದ್ದರೂ ಅವರೆಲ್ಲರೂ ಜೊತೆಯಾಗಿಯೇ ಕೆಲಸ ಮಾಡಿದರು…ಪ್ರತೀ ಸಂದರ್ಭದಲ್ಲಿಯೂ ಪ್ರತಿಯೊಂದು ವಾದಕ್ಕೂ, ಪ್ರಶ್ನೆಗೂ, ಸಂಶಯಕ್ಕೂ ಅತ್ಯಂತ ಜಾಗರೂಕತೆಯಿಂದ, ಬರವಣಿಗೆಯಲ್ಲಿಯೇ ಪ್ರತಿಕ್ರಿಯೆಗಳನ್ನು ನೀಡಲಾಗುತ್ತಿತ್ತು. ಹೀಗೆ, ದೇಶದ ಅತ್ಯಂತ ಹಿಂದುಳಿದವರ ಹಗೂ ಕಡು ಬಡವರ ಹಿತಾಸಕ್ತಿಗಳ ರಕ್ಷಣೆಗಾಗಿ ಅಂಬೇಡ್ಕರ್ ಅವರು ಹೊಂದಿದ್ದ ಕಾಳಜಿಯನ್ನೂ, ದೂರದರ್ಶಿತ್ವವನ್ನೂ ಈ ಪಠ್ಯ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಿಸಿರುವುದನ್ನು ಕಾಣುತ್ತೇವೆ.

ಹಾಗಾದರೆ ಅವಹೇಳನ ಎಲ್ಲಿದೆ?

ಶಂಕರ್ ಅವರು 1949ರಲ್ಲಿ ಈ ವ್ಯಂಗ್ಯಚಿತ್ರವನ್ನು ರಚಿಸಿದಾಗ ಅಂಬೇಡ್ಕರ್ ಹಾಗೂ ನೆಹರೂ ಇಬ್ಬರೂ ಅತ್ಯಂತ ಸಕ್ರಿಯರಾಗಿದ್ದರು ಮತ್ತು ಅವರಾರೂ ಇದನ್ನು ವಿರೋಧಿಸಿದ್ದರೆನ್ನುವುದಕ್ಕೆ ಯಾವುದೇ ಆಧಾರಗಳು ಲಭ್ಯವಿಲ್ಲ (ಹಾಗೆ ವಿರೋಧಿಸುವುದಕ್ಕೆ ಕಾರಣಗಳೂ ಇರಲಿಲ್ಲವಲ್ಲ?) ಅದನ್ನು ಮೇ 12, 2012ರ ಹಿಂದೂ ಪತ್ರಿಕೆಯಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸುರೇಂದ್ರ ಚಿತ್ರಿಸಿದ್ದು ಹೀಗೆ:

ಅಂಬೇಡ್ಕರ್ ಅವರು ಶಂಕರ್ ಅವರ ವ್ಯಂಗ್ಯಚಿತ್ರವನ್ನು ತಡೆಯದೆ, ಅದನ್ನು ವಿರೋಧಿಸುತ್ತಿರುವವರನ್ನೇ ತಡೆಯುತ್ತಿದ್ದಾರೆ!

ಆದ್ದರಿಂದ ಶಂಕರ್ ಅವರ ವ್ಯಂಗ್ಯಚಿತ್ರವನ್ನು ವಿರೋಧಿಸುತ್ತಿರುವವರಲ್ಲಿ ವಿಚಾರ ಶಕ್ತಿಯ ಕೊರತೆ, ಗದ್ದಲದ ಬಯಕೆ, ಪ್ರಚಾರ ಪ್ರಿಯತೆ, ಅಸಹನೆ ಇತ್ಯಾದಿಗಳೇ ಎದ್ದು ಕಾಣುತ್ತಿವೆಯಲ್ಲದೆ ವಸ್ತು ನಿಷ್ಠತೆಯಲ್ಲ. ಇದು ಅಂಬೇಡ್ಕರ್ ಅವರಂತಹ ಮೇಧಾವಿ ವಿದ್ವಾಂಸರ ಆದರ್ಶಗಳಿಗೂ, ಅವರು ನಮಗಿತ್ತ ಸಂವಿಧಾನದ ಅತ್ಯಂತ ಪ್ರಗತಿಪರವಾದ, ದೂರದರ್ಶಿಯಾದ, ವೈಚಾರಿಕ ಸ್ವಾತಂತ್ರ್ಯಕ್ಕೆ ಪೂರಕವಾದ ಆಶಯಗಳಿಗೂ ಮಾಡುತ್ತಿರುವ ಅಪಚಾರವೆನ್ನದೆ ವಿಧಿಯಿಲ್ಲ.

ಇನ್ನೊಂದೆಡೆ, ಈ ವಿರೋಧವು ವ್ಯಕ್ತವಾದೊಡನೆ ಅದಕ್ಕೆ ತಲೆಬಾಗಿ, ಆ ಪಠ್ಯವನ್ನೇ ಹಿಂತೆಗೆಯುವುದಾಗಿ ಘೋಷಿಸಿದ ಕೇಂದ್ರ ಸರಕಾರದ ವಿವೇಚನಾ ರಹಿತ  ವರ್ತನೆಯಿಂದಾಗಿ ಸಂವಿಧಾನಕ್ಕಷ್ಟೇ ಅಲ್ಲ, ನಮ್ಮ ಶಿಕ್ಷಣ ವ್ಯವಸ್ಥೆಗೂ, ವಿಚಾರವಂತರಾಗಿ ಬೆಳೆಯಬೇಕಾಗಿರುವ ಮುಂದಿನ ಜನಂಗವಾದ ನಮ್ಮ ವಿದ್ಯಾರ್ಥಿಗಳಿಗೂ, ಪಠ್ಯ ಪುಸ್ತಕಗಳನ್ನು ತಯಾರಿಸುವಲ್ಲಿ ಅವಿರತವಾಗಿ ಶ್ರಮಿಸುವ ಎಲ್ಲ ವಿದ್ವಾಂಸರಿಗೂ ಅತ್ಯಂತ ಅನ್ಯಾಯವಾದಂತಾಗಿದೆ.

ಅದೇ ಪುಸ್ತಕದ ಏಳನೇ ಪುಟದಲ್ಲಿ ಶಂಕರ್ ರಚಿಸಿದ ಇನ್ನೊಂದು ವ್ಯಂಗ್ಯ ಚಿತ್ರವೂ ಇದೆ:

ಜನ ಗಣ ಮನ ಅಥವಾ ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕೆಂದು ಒತ್ತಾಯಿಸುತ್ತಿರುವ ಎರಡು ಗುಂಪುಗಳ ನಡುವೆ ಸಮತೋಲನ ಸಾಧಿಸಲು ನೆಹರೂ ಯತ್ನಿಸುತ್ತಿರುವುದನ್ನು ಅದರಲ್ಲಿ ಚಿತ್ರಿಸಲಾಗಿದೆ. ಜನ ಗಣ ಮನದ ಪರವಾಗಿರುವವರಲ್ಲಿ ಅಂಬೇಡ್ಕರ್ ಹಾಗೂ ಮೌಲಾನಾ ಆಜಾದ್ ವಾದ್ಯಗಳನ್ನು ಊದುತ್ತಿರುವಂತೆಯೂ, ವಂದೇ ಮಾತರಂ ಪರವಾಗಿರುವ ಬಲಪಂಥೀಯ ನಾಯಕರು ದೊಡ್ಡ ದನಿಯಲ್ಲಿ ಹಾಡುತ್ತಿರುವಂತೆಯೂ ಅದರಲ್ಲಿ ತೋರಿಸಲಾಗಿದೆ. ಶಂಕರ್ ಅವರ ವ್ಯಂಗ್ಯ ಚಿತ್ರವನ್ನು ವಿರೋಧಿಸುತ್ತಿರುವವರ ಕಣ್ಣಿಗೆ ಇದೇಕೆ ಬೀಳಲಿಲ್ಲವೋ?

ನಿಮ್ಮ ಟಿಪ್ಪಣಿ ಬರೆಯಿರಿ