ವ್ಯಂಗ್ಯ ಚಿತ್ರಕ್ಕೆ ವಿರೋಧ: ಸಂವಿಧಾನಕ್ಕೂ, ಅಂಬೇಡ್ಕರ್ ಅವರಿಗೂ ಅಪಚಾರ

ಮೇ 14, 2012

ನಮ್ಮ ಸಂಸತ್ತಿನ ಮೊದಲ ಅಧಿವೇಶನದ ವಜ್ರಮಹೋತ್ಸವದ ಆಚರಣೆಯ ಮುನ್ನಾ ದಿನವೇ, ನಮ್ಮ ಸಂವಿಧಾನಕರ್ತರು ಸಭೆ ಸೇರಿದ್ದ ಸಂಸತ್ತಿನ ಸಭಾಂಗಣದಲ್ಲಿಯೇ, ಅದೇ ಸಂಸತ್ತಿನ ಕಲಾಪಕ್ಕೆ ನೆಹರೂ ಹಾಗೂ ಬಾಬಾ ಸಾಹೆಬ್ ಅಂಬೇಡ್ಕರ್ ಅವರನ್ನೊಳಗೊಂಡ ವ್ಯಂಗ್ಯಚಿತ್ರದ ಹೆಸರಿನಲ್ಲಿ ಅಡ್ಡಿಯುಂಟು ಮಾಡಿದ ಪ್ರಸಂಗವು ನಡೆದಿರುವುದು ನಿಜಕ್ಕೂ ಒಂದು ವಿಪರ್ಯಾಸವೇ ಸರಿ. ಆ ಹಳೆಯ ವ್ಯಂಗ್ಯ ಚಿತ್ರದಿಂದ ನೆಹರೂ ಅವರಿಗಾಗಲೀ, ಬಾಬಾ ಸಾಹೆಬ್ ಅಂಬೇಡ್ಕರ್ ಅವರಿಗಾಗಲೀ ಯಾವುದೇ ರೀತಿಯ ಅಪಮಾನವಾಗಿದೆಯೆಂದು ನನಗನಿಸುವುದಿಲ್ಲ. ಬದಲಿಗೆ, ಅದನ್ನು ವಿರೋಧಿಸುವವರಿಂದಲೇ ನಮ್ಮ ಸಂವಿಧಾನದ ಆಶಯಗಳಿಗೂ, ಅಂಬೇಡ್ಕರ್ ಅವರ ದೂರದರ್ಶಿತ್ವಕ್ಕೂ ಅನ್ಯಾಯವಾಗಿದೆಯೆಂದು ಹೇಳಲೇಬೇಕಾಗುತ್ತದೆ; ನಮ್ಮೆಲ್ಲರಿಗೂ ಸಮಾನತೆಯನ್ನೂ, ಸ್ವಾತಂತ್ರ್ಯವನ್ನೂ, ಎಲ್ಲಾ ವಿಧದ ನಾಗರಿಕ ಹಕ್ಕುಗಳನ್ನೂ ಒದಗಿಸಿರುವ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ನಮ್ಮ ಸಂವಿಧಾನಕ್ಕೂ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅದನ್ನು ರಚಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದ ಬಾಬಾ ಸಾಹೆಬ್ ಅಂಬೇಡ್ಕರ್ ಅವರಿಗೂ ಈ ಘಟನೆಯಿಂದ ಅಪಮಾನವಾಗಿದೆಯೆಂದೇ ಹೇಳಬೇಕಾಗುತ್ತದೆ.

ಕೆಲ ಸಂಸತ್ ಸದಸ್ಯರನ್ನು ಕೆರಳಿಸಿದ ಆ ವ್ಯಂಗ್ಯ ಚಿತ್ರವನ್ನು 1949ರಲ್ಲಿ ಶಂಕರ ಪಿಳ್ಳೆ ರಚಿಸಿದ್ದರು. ಆ ವ್ಯಂಗ್ಯಚಿತ್ರದೊಳಗಿದ್ದ ನೆಹರೂ ಮತ್ತು ಬಾಬಾ ಸಾಹೆಬ್ ಅಂಬೇಡ್ಕರ್ ಅವರಿಬ್ಬರೂ ಭಾರತ ರತ್ನರಾಗಿದ್ದರೆ, ಶಂಕರ್ ನಮ್ಮ ದೇಶದ ಎರಡನೇ ಅತ್ಯುಚ್ಛ ಗೌರವವಾದ ಪದ್ಮವಿಭೂಷಣ ಪುರಸ್ಕೄತರು, ಭಾರತದಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳ ಪಿತಾಮಹರೆಂದೇ ಪ್ರಸಿದ್ಧರು.

ಅಷ್ಟಕ್ಕೂ ಆ ವ್ಯಂಗ್ಯಚಿತ್ರದಲ್ಲಿ ಏನಿದೆ? ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯು ಸಿದ್ಧ ಪಡಿಸಿದ ಹನ್ನೊಂದನೇ ತರಗತಿಯ ರಾಜಕೀಯ ಶಾಸ್ತ್ರದ ‘ಭಾರತೀಯ ಸಂವಿಧಾನದ ಅನುಷ್ಠಾನ’ ಎಂಬ ಹೆಸರಿನ ಪಠ್ಯ ಪುಸ್ತಕದ ಮೊದಲ ಅಧ್ಯಾಯದ 18ನೇ ಪುಟದಲ್ಲಿ ಈ ವ್ಯಂಗ್ಯಚಿತ್ರವನ್ನು ಅಳವಡಿಸಲಾಗಿದೆ.[ಪೂರ್ಣ ಪಠ್ಯಪುಸ್ತಕ ಇಲ್ಲಿ ಲಭ್ಯವಿದೆ http://upscportal.com/civilservices/ncert-books/class-xi-indian-constitution-at-work-political-science].

ಆ ವ್ಯಂಗ್ಯ ಚಿತ್ರದಲ್ಲಿ ಓಟದ ಸ್ಪರ್ಧೆಯ ಸನ್ನಿವೇಶವು ಚಿತ್ರಿತವಾಗಿದ್ದು, ಸಂವಿಧಾನ ರಚನಾ ಸಮಿತಿಯನ್ನು ನಿಧಾನವಾಗಿ ಓಡುತ್ತಿರುವ ಬಸವನ ಹುಳುವಿನಂತೆ ತೋರಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅದರ ಮೇಲೆ ಕುಳಿತು ಚಾಟಿ ಬೀಸುತ್ತಿದ್ದರೆ, ಪ್ರಧಾನಿ ನೆಹರೂ ಅದರ ಹಿಂದೆ ನಿಂತು ತಾವೂ ಚಾಟಿ ಬೀಸುತ್ತಿದ್ದಾರೆ. ಅಂದರೆ, ನಿಧಾನವಾಗಿ ಸಾಗುತ್ತಿದ್ದ ಸಂವಿಧಾನ ರಚನೆಯ ಕೆಲಸವನ್ನು ತ್ವರಿತಗೊಳಿಸುವಂತೆ ಈ ಇಬ್ಬರು ನಾಯಕರೂ ಪ್ರಚೋದಿಸುತ್ತಿರುವಂತೆ ಆ ವ್ಯಂಗ್ಯಚಿತ್ರದಲ್ಲಿ ತೋರಿಸಲಾಗಿದೆ. ಸಂವಿಧಾನ ರಚನೆಯನ್ನು ಕಾತರದಿಂದ ಕಾಯುತ್ತಿದ್ದ ದೇಶದ ಜನರನ್ನು ಸ್ಪರ್ಧೆಯ ಪ್ರೇಕ್ಷಕರಂತೆ ಚಿತ್ರಿಸಲಾಗಿದ್ದು, ಅವರೂ, ಈ ಮಹಾನ್ ನಾಯಕರಂತೆಯೇ, ಸಂವಿಧಾನ ರಚನೆಯ ಕೆಲಸವು ಬೇಗನೇ ಮುಗಿಯಲಿ ಎಂದು ಹಾರೈಸುತ್ತಿರುವಂತಿದೆ. ಇದರಲ್ಲಿ ನೆಹರೂ ಅಥವಾ ಅಂಬೇಡ್ಕರ್ ಅವರಿಗೆ ಅಪಮಾನವಾಗುವಂತದ್ದು ಏನಿದೆ? ಬದಲಿಗೆ, ಸಂವಿಧಾನ ರಚನೆಯ ಕೆಲಸವನ್ನು ಆದಷ್ಟು ತ್ವರಿತಗೊಳಿಸುವುದಕ್ಕೆ ಅವರೀರ್ವರ ಶ್ರಮವನ್ನು ಸೂಚಿಸುತ್ತಾ, ಅವರನ್ನು ಹೊಗಳುವಂತಿದೆ. ಸುತ್ತಲೂ ಸೇರಿರುವ ದೇಶದ ಜನರೂ ಅದಕ್ಕೆ ಸಮ್ಮತಿಸಿದಂತಿದೆ.

ಈ ವ್ಯಂಗ್ಯಚಿತ್ರದ ಕೆಳಗೆ ವಿದ್ಯಾರ್ಥಿಗಳಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದೆ: ಬಸವನ ಹುಳುವಿನ ವೇಗದಲ್ಲಿ ಸಾಗಿದ ಸಂವಿಧಾನ ರಚನೆಯ ಬಗ್ಗೆ ವ್ಯಂಗ್ಯಚಿತ್ರಕಾರನ ಕುಂಚದಲ್ಲಿ ಮೂಡಿದ ಅಭಿವ್ಯಕ್ತಿ. ಸಂವಿಧಾನ ರಚನೆಗೆ ಸುಮಾರು ಮೂರು ವರ್ಷಗಳೇ ಹಿಡಿದವು. ವ್ಯಂಗ್ಯಚಿತ್ರಕಾರನು ಇದನ್ನೇ ವ್ಯಾಖ್ಯಾನಿಸಿದ್ದಾನೆಯೇ? ನಿಮ್ಮಅಭಿಪ್ರಾಯದಂತೆ, ಸಂವಿಧಾನವನ್ನು ರಚಿಸಲು ಸಂವಿಧಾನ ರಚನಾ ಸಮಿತಿಗೆ ಅಷ್ಟೊಂದು ಸಮಯವು ಏಕೆ ಬೇಕಾಯಿತು?

ಇದಕ್ಕೆ ವಿವರಣೆಯೂ ಅಲ್ಲೇ ಇದೆ: ಸಂವಿಧಾನ ಸಭೆಯ ಸದಸ್ಯರು ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟಿದ್ದರೆಂಬ ಕಾರಣದಿಂದಲೇ ನಮ್ಮ ಸಂವಿಧಾನವು ಅಧಿಕಾರಯುತವಾಯಿತು. ಸಭೆಯ ಸದಸ್ಯರು ವಿವರವಾದ ಮಾತುಕತೆಗಳಿಗೂ, ವಿಚಾರಪ್ರದವಾದ ಚರ್ಚೆಗಳಿಗೂ ಅಪಾರವಾದ ಮಹತ್ವವನ್ನು ಕೊಟ್ಟಿದ್ದರು. ಅವರಾರೂ ತಮ್ಮ ಸ್ವಂತ ಹಿತಾಸಕ್ತಿಗಳನ್ನು ಸುಮ್ಮಗೇ ಮುಂದೊತ್ತುತ್ತಿರಲಿಲ್ಲ, ಬದಲಾಗಿ, ತಮ್ಮ ನಿಲುವಿನ ಬಗ್ಗೆ ಇತರ ಸದಸ್ಯರಿಗೆ ತಾತ್ವಿಕವಾದ ವಿವರಣೆಗಳನ್ನು ನೀಡುತ್ತಿದ್ದರು….ಸಂವಿಧಾನದ ಪ್ರತಿಯೊಂದು ವಿಧಿಯನ್ನು ಕಠಿಣವಾದ ವಿಮರ್ಶೆಗಳಿಗೂ, ಚರ್ಚೆಗಳಿಗೂ ಒಡ್ಡಿದ ಸಂವಿಧಾನ ಸಭೆಯ ವಿಪುಲವಾದ ನಡವಳಿಗಳು ಜನಾಭಿಪ್ರಾಯಕ್ಕಿತ್ತ ಅತ್ಯುತ್ತಮವಾದ ಮನ್ನಣೆಯಾಗಿದ್ದವು. ಇವೆಲ್ಲಕ್ಕೂ ಸಾಕಷ್ಟು ಸಮಯ ಹಿಡಿದದ್ದರಿಂದಲೇ ಸಂವಿಧಾನ ರಚನೆಯು ಬಸವನ ಹುಳುವಿನಂತೆ ನಿಧಾನವಾಯಿತು: ಸಂವಿಧಾನ ಸಭೆಯು ಎರಡು ವರ್ಷ, ಹನ್ನೊಂದು ತಿಂಗಳ ಅವಧಿಯಲ್ಲಿ ನೂರ ಅರುವತ್ತಾರು ದಿನಗಳ ಕಾಲ ಸಭೆ ಸೇರಿತ್ತು ಹಾಗೂ ಈ ಸಭೆಗಳಿಗೆ ಮಾಧ್ಯಮಗಳು ಹಾಗೂ ಜನಸಾಮಾನ್ಯರಿಗೆ ಮುಕ್ತವಾದ ಪ್ರವೇಶವಿತ್ತು.

ಈ ಪಠ್ಯದಲ್ಲಿ ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗುವಂತಹ ವಿಚಾರವೇನಾದರೂ ಇದೆಯೇ? ಸಂವಿಧಾನ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಎಂಟು ದೊಡ್ಡ ಸಮಿತಿಗಳಿದ್ದವು. ಜವಹರಲಾಲ್ ನೆಹರೂ, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನ ಆಜಾದ್ ಅಥವಾ ಅಂಬೇಡ್ಕರ್ ಈ ಸಮಿತಿಗಳಿಗೆ ಅಧ್ಯಕ್ಷರಾಗಿದ್ದರು.ಇವರೆಲ್ಲರೂ ಹಲವು ವಿಚಾರಗಳಲ್ಲಿ ತಮ್ಮೊಳಗೆ ಒಮ್ಮತಾಭಿಪ್ರಾಯವಿದ್ದ ನಾಯಕರೇನೂ ಆಗಿರಲಿಲ್ಲ. ಅಂಬೇಡ್ಕರ್ ಅವರು ಕಾಂಗ್ರೆಸ್ ಹಾಗೂ ಗಾಂಧಿಯವರ ಕಟು ಟೀಕಾಕಾರರಾಗಿದ್ದರು ಮತ್ತು ಪರಿಶಿಷ್ಟ ವರ್ಗದವರ ಏಳಿಗೆಗಾಗಿ ಅವರು ಸಾಕಷ್ಟು ಶ್ರಮಿಸುತ್ತಿಲ್ಲವೆಂದು ದೂರುತ್ತಿದ್ದರು. ಪಟೇಲ್ ಹಾಗೂ ನೆಹರೂ ಅವರ ನಡುವೆಯೂ ಹಲವು ವಿಚಾರಗಳಲ್ಲಿ ಭಿನ್ನಮತವಿತ್ತು. ಹಾಗಿದ್ದರೂ ಅವರೆಲ್ಲರೂ ಜೊತೆಯಾಗಿಯೇ ಕೆಲಸ ಮಾಡಿದರು…ಪ್ರತೀ ಸಂದರ್ಭದಲ್ಲಿಯೂ ಪ್ರತಿಯೊಂದು ವಾದಕ್ಕೂ, ಪ್ರಶ್ನೆಗೂ, ಸಂಶಯಕ್ಕೂ ಅತ್ಯಂತ ಜಾಗರೂಕತೆಯಿಂದ, ಬರವಣಿಗೆಯಲ್ಲಿಯೇ ಪ್ರತಿಕ್ರಿಯೆಗಳನ್ನು ನೀಡಲಾಗುತ್ತಿತ್ತು. ಹೀಗೆ, ದೇಶದ ಅತ್ಯಂತ ಹಿಂದುಳಿದವರ ಹಗೂ ಕಡು ಬಡವರ ಹಿತಾಸಕ್ತಿಗಳ ರಕ್ಷಣೆಗಾಗಿ ಅಂಬೇಡ್ಕರ್ ಅವರು ಹೊಂದಿದ್ದ ಕಾಳಜಿಯನ್ನೂ, ದೂರದರ್ಶಿತ್ವವನ್ನೂ ಈ ಪಠ್ಯ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಿಸಿರುವುದನ್ನು ಕಾಣುತ್ತೇವೆ.

ಹಾಗಾದರೆ ಅವಹೇಳನ ಎಲ್ಲಿದೆ?

ಶಂಕರ್ ಅವರು 1949ರಲ್ಲಿ ಈ ವ್ಯಂಗ್ಯಚಿತ್ರವನ್ನು ರಚಿಸಿದಾಗ ಅಂಬೇಡ್ಕರ್ ಹಾಗೂ ನೆಹರೂ ಇಬ್ಬರೂ ಅತ್ಯಂತ ಸಕ್ರಿಯರಾಗಿದ್ದರು ಮತ್ತು ಅವರಾರೂ ಇದನ್ನು ವಿರೋಧಿಸಿದ್ದರೆನ್ನುವುದಕ್ಕೆ ಯಾವುದೇ ಆಧಾರಗಳು ಲಭ್ಯವಿಲ್ಲ (ಹಾಗೆ ವಿರೋಧಿಸುವುದಕ್ಕೆ ಕಾರಣಗಳೂ ಇರಲಿಲ್ಲವಲ್ಲ?) ಅದನ್ನು ಮೇ 12, 2012ರ ಹಿಂದೂ ಪತ್ರಿಕೆಯಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸುರೇಂದ್ರ ಚಿತ್ರಿಸಿದ್ದು ಹೀಗೆ:

ಅಂಬೇಡ್ಕರ್ ಅವರು ಶಂಕರ್ ಅವರ ವ್ಯಂಗ್ಯಚಿತ್ರವನ್ನು ತಡೆಯದೆ, ಅದನ್ನು ವಿರೋಧಿಸುತ್ತಿರುವವರನ್ನೇ ತಡೆಯುತ್ತಿದ್ದಾರೆ!

ಆದ್ದರಿಂದ ಶಂಕರ್ ಅವರ ವ್ಯಂಗ್ಯಚಿತ್ರವನ್ನು ವಿರೋಧಿಸುತ್ತಿರುವವರಲ್ಲಿ ವಿಚಾರ ಶಕ್ತಿಯ ಕೊರತೆ, ಗದ್ದಲದ ಬಯಕೆ, ಪ್ರಚಾರ ಪ್ರಿಯತೆ, ಅಸಹನೆ ಇತ್ಯಾದಿಗಳೇ ಎದ್ದು ಕಾಣುತ್ತಿವೆಯಲ್ಲದೆ ವಸ್ತು ನಿಷ್ಠತೆಯಲ್ಲ. ಇದು ಅಂಬೇಡ್ಕರ್ ಅವರಂತಹ ಮೇಧಾವಿ ವಿದ್ವಾಂಸರ ಆದರ್ಶಗಳಿಗೂ, ಅವರು ನಮಗಿತ್ತ ಸಂವಿಧಾನದ ಅತ್ಯಂತ ಪ್ರಗತಿಪರವಾದ, ದೂರದರ್ಶಿಯಾದ, ವೈಚಾರಿಕ ಸ್ವಾತಂತ್ರ್ಯಕ್ಕೆ ಪೂರಕವಾದ ಆಶಯಗಳಿಗೂ ಮಾಡುತ್ತಿರುವ ಅಪಚಾರವೆನ್ನದೆ ವಿಧಿಯಿಲ್ಲ.

ಇನ್ನೊಂದೆಡೆ, ಈ ವಿರೋಧವು ವ್ಯಕ್ತವಾದೊಡನೆ ಅದಕ್ಕೆ ತಲೆಬಾಗಿ, ಆ ಪಠ್ಯವನ್ನೇ ಹಿಂತೆಗೆಯುವುದಾಗಿ ಘೋಷಿಸಿದ ಕೇಂದ್ರ ಸರಕಾರದ ವಿವೇಚನಾ ರಹಿತ  ವರ್ತನೆಯಿಂದಾಗಿ ಸಂವಿಧಾನಕ್ಕಷ್ಟೇ ಅಲ್ಲ, ನಮ್ಮ ಶಿಕ್ಷಣ ವ್ಯವಸ್ಥೆಗೂ, ವಿಚಾರವಂತರಾಗಿ ಬೆಳೆಯಬೇಕಾಗಿರುವ ಮುಂದಿನ ಜನಂಗವಾದ ನಮ್ಮ ವಿದ್ಯಾರ್ಥಿಗಳಿಗೂ, ಪಠ್ಯ ಪುಸ್ತಕಗಳನ್ನು ತಯಾರಿಸುವಲ್ಲಿ ಅವಿರತವಾಗಿ ಶ್ರಮಿಸುವ ಎಲ್ಲ ವಿದ್ವಾಂಸರಿಗೂ ಅತ್ಯಂತ ಅನ್ಯಾಯವಾದಂತಾಗಿದೆ.

ಅದೇ ಪುಸ್ತಕದ ಏಳನೇ ಪುಟದಲ್ಲಿ ಶಂಕರ್ ರಚಿಸಿದ ಇನ್ನೊಂದು ವ್ಯಂಗ್ಯ ಚಿತ್ರವೂ ಇದೆ:

ಜನ ಗಣ ಮನ ಅಥವಾ ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕೆಂದು ಒತ್ತಾಯಿಸುತ್ತಿರುವ ಎರಡು ಗುಂಪುಗಳ ನಡುವೆ ಸಮತೋಲನ ಸಾಧಿಸಲು ನೆಹರೂ ಯತ್ನಿಸುತ್ತಿರುವುದನ್ನು ಅದರಲ್ಲಿ ಚಿತ್ರಿಸಲಾಗಿದೆ. ಜನ ಗಣ ಮನದ ಪರವಾಗಿರುವವರಲ್ಲಿ ಅಂಬೇಡ್ಕರ್ ಹಾಗೂ ಮೌಲಾನಾ ಆಜಾದ್ ವಾದ್ಯಗಳನ್ನು ಊದುತ್ತಿರುವಂತೆಯೂ, ವಂದೇ ಮಾತರಂ ಪರವಾಗಿರುವ ಬಲಪಂಥೀಯ ನಾಯಕರು ದೊಡ್ಡ ದನಿಯಲ್ಲಿ ಹಾಡುತ್ತಿರುವಂತೆಯೂ ಅದರಲ್ಲಿ ತೋರಿಸಲಾಗಿದೆ. ಶಂಕರ್ ಅವರ ವ್ಯಂಗ್ಯ ಚಿತ್ರವನ್ನು ವಿರೋಧಿಸುತ್ತಿರುವವರ ಕಣ್ಣಿಗೆ ಇದೇಕೆ ಬೀಳಲಿಲ್ಲವೋ?


ಬಾಬಾ ರಾಮದೇವನ – ನಿಜರೂಪ

ಜೂನ್ 9, 2011

ಕಳೆದ ಕೆಲದಿನಗಳಿಂದ ಮಾಧ್ಯಮಗಳ ತುಂಬೆಲ್ಲ ಸ್ವಯಂಘೋಷಿತ ರಾಷ್ಟ್ರಸಂತ ಬಾಬಾ ರಾಮದೇವ ಸ್ವಾಮೀಜಿಯದೇ ಸುದ್ದಿ. ಭ್ರಷ್ಟಾಚಾರ ಹಾಗೂ ಕಾಳಧನಗಳ ವಿರುದ್ಧ ಆತನ ತಥಾಕಥಿತ ಮಹಾಸ‍ಂಗ್ರಾಮದ ಗದ್ದಲ. ತನ್ನ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ರಾಮದೇವ ಬಳಸಿಕೊಂಡದ್ದು ಮಹಾತ್ಮಾ ಗಾಂ‍ಧಿ, ಶಿವಾಜಿ, ಜಲಿಯನ್ ವಾಲಾಬಾಗ್ ಇತ್ಯಾದಿಗಳನ್ನು. ಇಪ್ಪತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಅಣಿಯಾಗಿದ್ದ ಬಾಬಾ ಒಂಭತ್ತೇ ದಿನಗಳಿಗೆ ಅದನ್ನು ಕೈಬಿಡಬೇಕಾಯಿತು.

ಅಷ್ಟಕ್ಕೂ ಈ ರಾಮದೇವನೇನು ಸಂತನೇ? ಆತನು ಹೇಳಿಕೊಂಡಿರುವುದೇನು ಮತ್ತು ವಾಸ್ತವವೇನು? ಇಲ್ಲಿವೆ ನೋಡಿ:

ಹೇಳಿಕೆ 1:

ತನ್ನ ಎಳವೆಯಲ್ಲಿ ತನಗೆ ಎಡ ಭಾಗದ ಪಾರ್ಶ್ವವಾಯುವುಂಟಾಗಿತ್ತು ಮತ್ತು ಋಷಿ ದಯಾನಂದ ಹಾಗೂ ಹಲವು ಮಾಹಾನುಭಾವರ ಆತ್ಮಕಥೆಗಳನ್ನು ಓದಿದ ಬಳಿಕ ತನ್ನ ಜೀವನವೇ ಬದಲಾಯಿತು ಎನ್ನುವುದು ರಾಮದೇವನ ಹೇಳಿಕೆ. [ನೋಡಿ ] ವ್ಹಾ!

ಅವನ ವಿಡಿಯೋ ವನ್ನು ಸೂಕ್ಷ್ಮವಾಗಿ ಪರಿಶೀಲಿಸಿ.

ರಾಮದೇವನ ಎಡ ಕಣ್ಣು ಮಿಟುಕುತ್ತಿರುತ್ತದೆ, ಬಾಯಿಯ ಎಡ ಭಾಗವು ಸರಿಯಾಗಿ ತೆರೆದುಕೊಳ್ಳುತ್ತದೆ ಹಾಗೂ ಎಡಹಣೆಯಲ್ಲಿ ನೆರಿಗೆಗಳು ಸಹಜವಾಗಿ ಮೂಡುತ್ತವೆ. ಅವನ ಬಲಗಣ್ಣು ಎಡಗಣ್ಣಿನಷ್ಟು ಸಲೀಸಾಗಿ ಮಿಟುಕುವುದಿಲ್ಲ, ಬಾಯಿಯ ಬಲಭಾಗವು ಎಡಭಾಗದಷ್ಟು ಸುಲಭದಲ್ಲಿ ತೆರೆದುಕೊಳ್ಳುವುದಿಲ್ಲ ಹಾಗೂ ಹಣೆಯ ಬಲಭಾಗದಲ್ಲಿ ಎಡಭಾಗದಲ್ಲಿರುವಷ್ಟು ನೆರಿಗೆಗಳು ಮೂಡುವುದಿಲ್ಲ. ಅಂದರೆ ಅವನ ಮುಖದ ಬಲಭಾಗದ ಸ್ನಾಯುಗಳು ಎಡಭಾಗದ ಸ್ನಾಯುಗಳಷ್ಟು ಸಲೀಸಾಗಿ ಕೆಲಸ ಮಾಡುವುದಿಲ್ಲ. ಹೋಲಿಕೆಗಾಗಿ ಕೆಳಗೆ ನೀಡಿರುವ ಇನ್ನೊಂದು ವಿಡಿಯೋದಲ್ಲಿ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣಬಹುದು.

ಹೀಗಾಗುವುದಕ್ಕೆ ಮುಖದ ಬಲಭಾಗದ ನರದೌರ್ಬಲ್ಯವೇ ಕಾರಣ. ಇದನ್ನು ಬೆಲ್ಸ್ ಪಾಲ್ಸಿ ಎಂದೂ ಹೇಳಲಾಗುತ್ತದೆ. ಇದು ಅದೊಂದೇ ನರವನ್ನೊಳಗೊಂಡ ಸಮಸ್ಯೆಯಾಗಿದ್ದು, ಅದರೊಂದಿಗೆ ದೇಹದ ಇತರ ಭಾಗಗಳಲ್ಲಿ ದೌರ್ಬಲ್ಯತೆ ಇರುವುದಿಲ್ಲ ಹಾಗೂ ಹೆಚ್ಚಿನವರಲ್ಲಿ 2-3 ವಾರಗಳಲ್ಲಿ ಅದು ತನ್ನಿಂತಾನಾಗಿ ಸುಧಾರಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಪಾರ್ಶ್ವವಾಯುವಿನ ಜೊತೆಗೆ ಮುಖದ ನರದೌರ್ಬಲ್ಯವುಂಟಾದ ಸಂದರ್ಭಗಳಲ್ಲಿ ಹಣೆಯಲ್ಲಿ ನೆರಿಗೆಗಳ ಮೂಡುವಿಕೆ ಹಾಗೂ ಕಣ್ಣಿನ ರೆಪ್ಪೆಗಳ ಮುಚ್ಚುವಿಕೆಗಳು ಅಬಾಧಿತವಾಗಿರುತ್ತವೆ. ಆದ್ದರಿಂದ ರಾಮದೇವನಿಗೆ ಆಗಿರುವುದು ಬಲಭಾಗದ ಮುಖದ ನರದೌರ್ಬಲ್ಯವೇ ಹೊರತು ಎಡಭಾಗದ ಪಾರ್ಶ್ವವಾಯುವಲ್ಲ. ತನಗೆ ಎಡ ಭಾಗದ ಪಾರ್ಶ್ವವಾಯುವುಂಟಾಗಿತ್ತು ಎನ್ನುವ ಆತನ ಹೇಳಿಕೆಯು ಸುಳ್ಳಷ್ಟೇ ಅಲ್ಲ, ವೈದ್ಯಶಾಸ್ತ್ರದ ಕೆಲವೊಂದು ಸರಳ ವಿಚಾರಗಳೂ ಅವನಿಗೆ ಅರಿವಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಹೇಳಿಕೆ 2:

ಆಚಾರ್ಯ ಬಾಲಕೃಷ್ಣ ತನ್ನ ಆಪ್ತ ಸಂಗಾತಿ ಹಾಗೂ ಸಹಪಾಠಿಯೆಂದೂ, ಹಿಮಾಲಯದ ಉನ್ನತ ಶಿಖರಗಳಲ್ಲಿರುವ ಗಂಗೋತ್ರಿ ಗುಹೆಗಳಲ್ಲಿ ತನ್ನಂತೆಯೇ ಕಾರ್ಯಪ್ರವೃತ್ತನಾಗಿದ್ದ ವೇಳೆ ತಾವಿಬ್ಬರೂ ಅದೃಷ್ಟವಶಾತ್ ಜೊತೆ ಸೇರುವಂತಾಯಿತೆಂದೂ ರಾಮದೇವ ಹೇಳಿಕೊಂಡಿದ್ದಾನೆ. [ನೋಡಿ 1, 2]

ಬಾಲಕೃಷ್ಣ ಹಿಮಾಲಯದಲ್ಲಿರುವ ನೇಪಾಲದಿಂದ ತಪ್ಪಿಸಿಕೊಂಡು ಬಂದಿರುವ ಅಪರಾಧಿಯೆಂದೂ, ಅವನು ಸುಳ್ಳು ದಾಖಲೆಗಳ ಮೂಲಕ ಭಾರತೀಯ ರಹದಾರಿ ಪತ್ರವನ್ನು ಪಡೆದಿರುವ ಬಗ್ಗೆ ಹಾಗೂ ಶಸ್ತ್ರಾಸ್ತ್ರ ಕಾಯಿದೆಯನ್ನು ಉಲ್ಲಂಘಿಸಿರುವ ಬಗ್ಗೆ ಉತ್ತರಾಖಂಡದ ಪೋಲೀಸರು ಹಾಗೂ ಗುಪ್ತಚರ ವಿಭಾಗದವರು ಕೆಲ ವರ್ಷಗಳಿಂದ ತನಿಖೆ ನಡೆಸುತ್ತಿದ್ದಾರೆಂದೂ ವರದಿಗಳಿವೆ. [ನೋಡಿ 1, 2]

ಹೇಳಿಕೆ 3:

ಸಂಸ್ಕೃತ, ವ್ಯಾಕರಣ, ಯೋಗ, ದರ್ಶನ, ವೇದಗಳು ಹಾಗೂ ಉಪನಿಷತ್ತುಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ ಎನ್ನುವುದು ರಾಮದೇವನ ಹೇಳಿಕೆಯಾದರೆ, ಅವನ ಜೊತೆಗಾರ ಬಾಲಕೃಷ್ಣ ಇನ್ನೂ ಮುಂದೆ ಹೋಗಿ ತಾನೋರ್ವ ಸರಳ ಸ್ವಭಾವದ, ನಿಗರ್ವಿಯಾದ, ಬಹುಮುಖ ಪ್ರತಿಭೆಯುಳ್ಳ ಮೇಧಾವಿಯೆಂದೂ, ಆಯುರ್ವೇದ, ಸಂಸ್ಕೃತ ಭಾಷೆ ಮತ್ತು ವ್ಯಾಕರಣ ಹಾಗೂ ವೇದಗಳ ಮಹಾಪಂಡಿತನೆಂದೂ,, ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆಂದೂ ಹೇಳಿಕೊಂಡಿದ್ದಾನೆ. [ನೋಡಿ 1, 2]

ನಮ್ಮ ದೇಶದಲ್ಲಿ ಆಯುರ್ವೇದ ಶಾಸ್ತ್ರದಲ್ಲಿ ಔಪಚಾರಿಕ ಶಿಕ್ಷಣವು ನಾಲ್ಕೂವರೆ ವರ್ಷಗಳ ಅವಧಿಯದಾಗಿದ್ದು, ತದನಂತರ ಒಂದು ವರ್ಷದ ಇಂಟರ್ನ್ ಶಿಪ್ ಬಳಿಕ ಅಧಿಕೃತವಾದ ಬಿಎಎಂಎಸ್ ಪದವಿಯನ್ನು ನೀಡಲಾಗುತ್ತದೆ. ರಾಮದೇವನಾಗಲೀ, ಬಾಲಕೃಷ್ಣನಾಗಲೀ ಅಂತಹ ತರಬೇತಿಯನ್ನು ಪಡೆದಂತಿಲ್ಲ. ಹಾಗಿದ್ದರೂ ಆಯುರ್ವೇದದ ಮಹಾಪಂಡಿತರೆಂಬ ಸೋಗಿನಲ್ಲಿ ಚಿಕಿತ್ಸೆ ನೀಡುವುದಕ್ಕೂ, ಹಲಬಗೆಯ ಉತ್ಪನ್ನಗಳನ್ನು ಆಯುರ್ವೇದದ ಹೆಸರಲ್ಲಿ ತಯಾರಿಸಿ ಮಾರುವುದಕ್ಕೂ ಅವರಿಗೆ ಅವಕಾಶ ನೀಡಲಾಗಿದೆ! ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯುರ್ವೇದದಲ್ಲಿ ಸ್ನಾತಕೋತ್ತರೆ ವಿಭಾಗವೇ ಇಲ್ಲ, ಅಂತಹ ಪದವಿಯನ್ನೂ ಅಲ್ಲಿ ನೀಡಲಾಗುವುದಿಲ್ಲ.[ಮೂಲ: ವಿವಿಯ ತಾಣ ಹಾಗೂ ವಿವಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೊಂದಿಗೆ ನನ್ನ ಸಂವಾದ, ದೂರವಾಣಿ +91-9415201031]. ಆದ್ದರಿಂದ ’ಮಹಾ ಪಂಡಿತ’ ಬಾಲಕೃಷ್ಣ ಈ ವಿವಿಯಲ್ಲಿ ಯಾವ ಸ್ನಾತಕೋತ್ತರ ಪದವಿಯನ್ನು ಪಡೆದನೆನ್ನುವುದು ಸ್ಪಷ್ಟವಿಲ್ಲ.

ಹೇಳಿಕೆ 4:

ಯೋಗವಿದ್ಯೆಯಲ್ಲಿ ಸ್ನಾತಕೋತ್ತರ ವ್ಯಾಸಂಗವೂ ಸೇರಿದಂತೆ ಸಾಕಷ್ಟು ಪಾಂಡಿತ್ಯವಿದೆಯೆಂದು ಹೇಳಿಕೊಂಡಿರುವ ರಾಮದೇವ ಮತ್ತು ಬಾಲಕೃಷ್ಣರು ಟಿವಿ ಮತ್ತಿತರ ಮಾಧ್ಯಮಗಳ ಮೂಲಕವೂ, ಸಹಸ್ರಾರು ಜನರು ಭಾಗವಹಿಸುವ ಶಿಬಿರಗಳ ಮೂಲಕವೂ ಪತಂಜಲಿಯ ಯೋಗ ಹಾಗೂ ಆಯುರ್ವೇದಗಳ ಮರ್ಮವೇನೆಂದು ಇಡೀ ಜಗತ್ತಿನಲ್ಲಿ ಪ್ರಚುರಪಡಿಸಿ ಅವನ್ನು ಜನಪ್ರಿಯಗೊಳಿಸುವ ಅತಿ ದುಸ್ತರವಾದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರಂತೆ.[ನೋಡಿ]

ಆದರೆ ಈ ಸ್ವಯಂಘೋಷಿತ ಮಹಾಪಂಡಿತನಿಗೆ ಸರಳವಾದ ವಕ್ರಾಸನವನ್ನು ಮಾಡುವುದು ಹೇಗೆನ್ನುವುದು ಸರಿಯಾಗಿ ತಿಳಿದಂತಿಲ್ಲ.. [ವಿಡಿಯೋ ನೋಡಿ]

ಅದೇ ವಕ್ರಾಸನವನ್ನು ಮಾಡುವ ಸರಿಯಾದ ವಿಧಾನವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.[See]

ಮಹಾ ಗುರುಗಳ ಯೋಗ ಪರಿಣತಿ ಹೀಗಿದೆ!

ಹೇಳಿಕೆ 5:

ಈ ಸ್ವಯಂಘೋಷಿತ ಮೇಧಾವಿಗಳು ಯೋಗ ಹಾಗೂ ಆಯುರ್ವೇದದಲ್ಲಿ ತಮಗಿರುವ ಮಹಾ ಪಾಂಡಿತ್ಯದಿಂದ ಲಕ್ಷಗಟ್ಟಲೆ [ಬಾಲಕೃಷ್ಣನ ಹೇಳಿಕೆ ನೋಡಿ] (ಯಾ ಕೋಟಿಗಟ್ಟಲೆ? ರಾಮದೇವನ ಹೇಳಿಕೆ ನೋಡಿ) ರೋಗಿಗಳನ್ನು ಹಲವು ತರಹದ ಅತಿ ಕಷ್ಟಕರವಾದ, ದೀರ್ಘಕಾಲದ, ಗುಣಪಡಿಸಲಾಗದ ರೋಗಗಳಾದ ಮಧುಮೇಹ, ಗಂಟುನೋವು, ವಾತ, ಗೌಟ್, ತಲೆನೋವು, ಕತ್ತು ನೋವು, ಶ್ವಾಸಾಂಗದ ಕಾಹಿಲೆಗಳು, ಅಸ್ತಮಾ, ಕ್ಯಾನ್ಸರ್, ನರರೋಗಗಳು, ಹೃದ್ರೋಗಗಳು, ಮೆದುಳಿನ ರೋಗಗಳು ಇತ್ಯಾದಿಗಳಿಂದ ಮುಕ್ತರನ್ನಾಗಿಸಿದ್ದಾರಂತೆ! ಈ ಎಲ್ಲಾ ಯಶಸ್ವೀ ಚಿಕಿತ್ಸಾಕ್ರಮಗಳ ಬಗ್ಗೆ ಆಚಾರ್ಯರ ಪುಸ್ತಕ Yoga In Synergy With Medicial Science ನಲ್ಲಿ ಹೇಳಲಾಗಿದೆಯಂತೆ.[See ] ಅವರಿಬ್ಬರೂ ಇದುವರೆಗೆ ಮಾಡಿರುವ ಸಂಶೋಧನೆಗಳ ಪ್ರಕಾರ ಜಗತ್ತಿನಲ್ಲಿರುವ ಸಕಲ ಸಮಸ್ಯೆಗಳನ್ನೂ ಯೋಗದಿಂದಲೇ ಪರಿಹರಿಸಬಹುದಾಗಿದ್ದು, ಭೂಮಿಯಲ್ಲಿ ಸ್ವರ್ಗವೇ ಅವತರಿಸಲಿದೆಯಂತೆ.[ನೋಡಿ]

ಆದರೆ ಎಲ್ಲಿದೆ ಪುರಾವೆ? ಮೇಲೆ ಹೇಳಿದ ಪುಸ್ತಕದಲ್ಲಾಗಲೀ, ಅವರ ಪ್ರಕಟಿತ ಸಂಶೋಧನೆಗಳ ಪಟ್ಟಿಗಳಲ್ಲಾಗಲೀ ಈ ಅತ್ಯದ್ಭುತ ಸಾಧನೆಗಳನ್ನು ಬೆಂಬಲಿಸುವ ಯಾವುದೇ ಪುರಾವೆಯು ಕಾಣಸಿಗುವುದಿಲ್ಲ. [ನೋಡಿ 1, 2 ]

ಅಂಕೆಸಂಖ್ಯೆಗಳ ಬಗ್ಗೆ ಇಬ್ಬರಿಗೂ ಗೌರವವೇನೂ ಇದ್ದಂತಿಲ್ಲ, ಲಕ್ಷ-ಕೋಟಿಗಳಿಗೆಲ್ಲ ಲೆಕ್ಕವೇ ಇಲ್ಲ!

ಹೇಳಿಕೆ 6:

ಯೋಗ ಹಾಗೂ ಆಯುರ್ವೇದಗಳತ್ತ ವೈಜ್ಞಾನಿಕ ಅನುಸಂಧಾನದ ಮೂಲಕ ಜಗತ್ತನ್ನು ರೋಗಮುಕ್ತಗೊಳಿಸಿ, ಹೊಸ ವಿಶ್ವ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸುವುದು, ರೋಗಮುಕ್ತವಾದ ಹಾಗೂ ಔಷಧಮುಕ್ತವಾದ ಹೊಸ ಜಾಗತಿಕ ವ್ಯವಸ್ಥೆಯನ್ನು ಸ್ಥಾಪಿಸುವುದು, ಪ್ರಾಣಾಯಾಮವನ್ನು ಕಾಹಿಲೆಗಳಿಗೆ ಉಚಿತ ಚಿಕಿತ್ಸೆಯಂತೆ ಜಗತ್ತಿನಾದ್ಯಂತ ಪ್ರಚುರಪಡಿಸುವುದು ಹಾಗೂ ಯೋಗವಿಧಾನಗಳಿಂದ ಔಷಧಗಳ ಮಾರಣಾಂತಿಕ ಪರಿಣಾಮಗಳನ್ನು ಇಲ್ಲವಾಗಿಸಿ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸುವುದು ಬಾಬಾ ರಾಮದೇವನ ಯೋಜನೆಯಂತೆ. [ನೋಡಿ]

ರೋಗಮುಕ್ತವಾದ ಹಾಗೂ ಔಷಧಮುಕ್ತವಾದ ಹೊಸ ಜಾಗತಿಕ ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೆ ಕಟಿಬದ್ಧನಾಗಿದ್ದೇನೆಂದು ಹೇಳಿಕೊಳ್ಳುವ ರಾಮದೇವನ ದಿವ್ಯಾ ಫಾರ್ಮೆಸಿಯ ಮೂಲಕ 285 ರಷ್ಟು ಔಷಧಗಳನ್ನೂ ಇನ್ನಿತರ ಉತ್ಪನ್ನಗಳನ್ನೂ ದೇಶದ ಮೊಲೆಮೂಲೆಗಳಲ್ಲಿ ಮಾರಲಾಗುತ್ತಿದೆ. [ನೋಡಿ] ರಾಮದೇವನ ಹೇಳಿಕೆಯಂತೆ ಅವನ ಔಷಧಗಳ ಮಾರಾಟದಿಂದ ಇದುವರೆಗಿನ ಗಳಿಸಿರುವ ವರಮಾನವೇ ಸುಮಾರು ರೂ.1100 ಕೋಟಿಯಷ್ಟಾಗಿದೆ! [ನೋಡಿ] ಔಷಧಗಳ ಮಾರಣಾಂತಿಕ ಪರಿಣಾಮಗಳನ್ನು ಇಲ್ಲವಾಗಿಸಿ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸ ಬಯಸುವ ರಾಮದೇವನ ಔಷಧಗಳಿಂದಲೂ, ಚಿಕಿತ್ಸೆಗಳಿಂದಲೂ ಗಂಭೀರವಾದ ಸಮಸ್ಯೆಗಳೂ. ಸಾವುಗಳೂ ಉಂಟಾದ ಬಗ್ಗೆ ಆಗಾಗ ವರದಿಯಾಗುತ್ತಿರುತ್ತವೆ. [ನೋಡಿ 1, 2]

ಹೇಳಿಕೆ 7: ತಾನು ಪಾರದರ್ಶಕತೆಯ ಮಾರ್ಗದಲ್ಲಿ ಸಾಗುತ್ತಿರುವುದಾಗಿ ಬಾಬಾ ರಾಮದೇವ್ ಹೇಳುತ್ತಾನೆ[ನೋಡಿ].

ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಹೊಂದಿರುವ ಬಗ್ಗೆ ಹಾಗೂ ಭೂ ಕಬಳಿಕೆ ಮಾಡಿರುವ ಬಗ್ಗೆ ಹಲವು ಗಂಭೀರವಾದ ಆರೋಪಗಳು ಅವನ ಮೇಲಿವೆ. [ನೋಡಿ 1, 2, 3, 4, 5, 6, 7, 8] ಅನುಷ್ಠಾನ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳು ಈ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿವೆ..[ನೋಡಿ 1, 2]

ಹೇಳಿಕೆ 8:

ರಾಜಕೀಯ ರಹಿತ ಜೀವನವು ಒಳ್ಳೆಯ ನಡತೆಗಳ ಲಕ್ಷಣಗಳಲ್ಲೊಂದು ಎನ್ನುವುದು ಬಾಬಾ ರಾಮದೇವನ ಹೇಳಿಕೆ. [ನೋಡಿ].

ಆರ್ಎಸ್ಸೆಸ್, ವಿಹಿಂಪ ಹಾಗೂ ಭಾಜಪಗಳ ಜೊತೆ ಅವನು ಅತಿ ನಿಕಟ ಸಂಬಂಧವನ್ನು ಹೊಂದಿರುವ ಬಗ್ಗೆ ಹಾಗೂ ಅವರೊಡನೆ ಸೇರಿ ಸರಕಾರವನ್ನು ಅಭದ್ರಗೊಳಿಸುವ ಯೋಜನೆಯನ್ನು ಹಾಕಿರುವ ಬಗ್ಗೆ ವರದಿಯಾಗಿವೆ.[ರಾಮದೇವ ಹಾಗೂ ವಿಹಿಂಪ ಗುಪ್ತ ಸಭೆಯ ವಿಡಿಯೋ; ವರದಿ 1, ವರದಿ 2 ].

ಹೇಳಿಕೆ 9: ಯಾವತ್ತೂ ಶಾಂತನಾಗಿರುವುದು ಹಾಗೂ ಅಹಂಕಾರಮುಕ್ತನಾಗಿರುವುದು ತನ್ನ ಜೀವನದ ತತ್ವವೆಂದು ಹೇಳಿಕೊಳ್ಳುವ ರಾಮದೇವ [ನೋಡಿ], ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಒಳ್ಳೆಯ ದೈಹಿಕ ಆರೋಗ್ಯವಷ್ಟೇ ಅಲ್ಲದೆ ಆರೋಗ್ಯವಂತ ಚಿಂತನೆಗಳೂ, ಧನಾತ್ಮಕ ಮನಸ್ಥಿತಿಯೂ ಉಂಟಾಗುತ್ತದೆಯೆಂದೂ, ಆರೋಗ್ಯವಂತವಾದ ಹಾಗೂ ಸಂವೇದನಾಶೀಲವಾದ ಮನಸ್ಸು ಹಾಗೂ ದೇಹಗಳು ಎಲ್ಲಾ ತರದ ಹಿಂಸೆ ಹಾಗೂ ಕ್ರೌರ್ಯ, ಜಾತೀಯತೆ, ಪ್ರಾದೇಶಿಕತೆ, ಧರ್ಮಾಂಧತೆ ಇತ್ಯಾದಿಗಳಿಂದ ಮುಕ್ತವಾಗಿರುತ್ತದೆ ಹಾಗೂ ಈ ಕಾರಣಕ್ಕೆ ಜಗತ್ತಿನಲ್ಲಿ ಸೌಹಾರ್ದತೆ, ಶಾಂತಿ, ಪ್ರೀತಿ, ಮಾನವೀಯತೆ, ಸೇವಾಭಾವ ಹಾಗೂ ಸಹಿಷ್ಣುತೆಗಳು ನೆಲೆಗೊಳ್ಳುತ್ತವೆ ಎನ್ನುತ್ತಾನೆ.[ನೋಡಿ] ಅದಲ್ಲದೆ, ಒಬ್ಬ ಮಹಾನ್ ಯೋಗಗುರುವಾಗಿದ್ದು ಚಿತ್ತವೃತ್ತಿನಿರೋಧವನ್ನು ಆತ ಮೈಗೂಡಿಸಿಕೊಂಡಿರಲೇ ಬೇಕಲ್ಲವೇ?

ಆದರೆ ಪ್ರತಿ ಜಿಲ್ಲೆಗೆ ಇಪ್ಪತ್ತರಂತೆ 11000 ಸಶಸ್ತ್ರ ಬೆಂಬಲಿಗರ ಸೇನೆಯನ್ನೇ ಕಟ್ಟಲಿದ್ದೇನೆಂದು ರಾಮದೇವ ಈಗ ಕೇಂದ್ರ ಸರಕಾರಕ್ಕೆ ಬೆದರಿಕೆ ಹಾಕಿದ್ದಾನೆ. [ನೋಡಿ 1, 2, 3] ಭ್ರಷ್ಟರಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಅವನ ಬೇಡಿಕೆಯಲ್ಲೂ ಅವನ ಕ್ರೌರ್ಯದ ಮನಸ್ಥಿತಿಯೇ ಎದ್ದು ಕಾಣುತ್ತದೆ.[ನೋಡಿ 1, 2]

ಹೇಳಿಕೆ 10:

ಯೋಗದಿಂದ ಚಿತ್ತವೃತ್ತಿನಿರೋಧವಾಗಬೇಡವೇ?

ಮೂರೇ ದಿನಕ್ಕೆ ರಾಮಲೀಲಾ ಮೈದಾನದಿಂದ ದಬ್ಬಲ್ಪಟ್ಟ ಬಳಿಕ ರಾಮದೇವ ಹಾಗೂ ಬಾಲಕೃಷ್ಣರಿಬ್ಬರೂ ಗದ್ಗದಿತರಾಗಿ ಅತ್ತರಂತೆ!. [ನೋಡಿ 1, 2]

ಇಪ್ಪತ್ತು ದಿನಗಳ ಕಾಲ ತಮ್ಮ ಯೋಗ ಹಾಗೂ ‘ಪ್ರಾಣ’ದ ಬಲದಿಂದ ಉಪವಾಸ ನಿರತರಾಗುವ ಯೋಜನೆಯಿಟ್ಟು ರಾಮಲೀಲಾ ಮೈದಾನವನ್ನು ಕಾದಿರಿಸಲಾಗಿತ್ತು.  ಆದರೆ ಆದದ್ದೇನು? ರಾಮಲೀಲಾ ಮೈದಾನದಿಂದ ದಬ್ಬಲ್ಪಟ್ಟ ಬಳಿಕ ಹರಿದ್ವಾರದ ತನ್ನ ಆಶ್ರಮದಲ್ಲಿ ಉಪವಾಸವನ್ನು ಮುಂದುವರಿಸಿದ ಬಾಬಾ ಏಳನೇ ದಿನಕ್ಕೇ ಅಸ್ವಸ್ಥನಾಗಿ ಅತ್ಯಾಧುನಿಕ ಆಸ್ಪತ್ರೆಯನ್ನು ಸೇರಿ ಚಿಕಿತ್ಸೆ ಪದೆಯಬೇಕಾಯಿತು, ಒಂಭತ್ತನೇ ದಿನಕ್ಕೆ ಉಪವಾಸವನ್ನೇ ಕೊನೆಗೊಳಿಸಬೇಕಾಯಿತು.  ಜಗತ್ತಿನ ಸರ್ವ ಸಮಸ್ಯೆಗಳನ್ನೂ ಸರಿಪಡಿಸಿ, ಮನುಷ್ಯನನ್ನು ಅತ್ಯಂತ ಸದೃಢನಾಗಿಸುತ್ತದೆಯೆನ್ನಲಾಗಿದ್ದ ಯೋಗಶಕ್ತಿ ರಾಮದೇವನ ನೆರವಿಗೆ ಬಂದಂತಿಲ್ಲ. [ನೋಡಿ 12,3]


ಗೋರಕ್ಷಣೆಯೂ, ಭೂ ಭಕ್ಷಣೆಯೂ

ಫೆಬ್ರವರಿ 24, 2010

ಗೋರಕ್ಷಣೆಗಾಗಿ ಎಕರೆಗಟ್ಟಲೆ ಗೋಮಾಳಗಳು ಬೇಕಾಗುತ್ತವಂತೆ ಮತ್ತು ಎಷ್ಟು ಎಕರೆಗಳನ್ನು ‘ಮೀಸಲಿಡಲಾಗಿದೆ’ಯೆನ್ನುವ ಲೆಕ್ಕವನ್ನು ಗೋವುಗಳಂತೂ ಕೇಳುವುದಿಲ್ಲವಲ್ಲ! ಗೋರಕ್ಷಣೆಗಾಗಿ, ರಾಜರ ನೆನಪಿನ ಪುನಶ್ಚೇತನಕ್ಕಾಗಿ ಭೂಭಕ್ಷಣೆಯಾಗುತ್ತಿದೆಯೇ ಎನ್ನುವುದನ್ನು ಈ ನಾಡಿನ ಪ್ರಜ್ಞಾವಂತರು ಕೇಳಲೇಬೇಕಾಗಿದೆ.
ಫೆ. 24, 2010 ರ ಪ್ರಜಾವಾಣಿ ನೋಡಿ


ಸಂಸ್ಕೃತಿ ಸಂರಕ್ಷಕರ ಭಯೋತ್ಪಾದನೆಯಿಂದ ಗಜರಾಜನಾದ ಗಣರಾಜ

ಫೆಬ್ರವರಿ 1, 2009

ಗಾಳಿಪಟಗಾಳಿಪಟ ಹಾರಿಸುವ ಮಂಗಳೂರಿನ ಹವ್ಯಾಸಿ ತಂಡದವರು ಗಣೇಶನ ರೂಪದಲ್ಲಿ ಸುಂದರವಾದ ಗಾಳಿಪಟವನ್ನು ತಯಾರಿಸಿದ್ದು, ಅದನ್ನು ಹಾರಿಸುವುದರಿಂದ  ‘ಹಿಂದೂ ಧರ್ಮಕ್ಕೆ ಸೇರಿದವರೆಲ್ಲರ ಭಾವನೆಗಳಿಗೆ ಧಕ್ಕೆಯಾಗುತ್ತದೆಯೆಂದು’ ಕೇವಲ ಬೆರಳೆಣಿಕೆಯಷ್ಟಿರುವ ಕೆಲವು ‘ಸ್ವಯಂಘೋಷಿತ ಧರ್ಮ ಸಂರಕ್ಷಕರು’ ಬೆದರಿಕೆಯನ್ನೊಡ್ಡಿದ್ದರಿಂದ ಅದನ್ನು ಮಂಗಳೂರಿನ ಕಡಲತೀರದಲ್ಲಿ ಬಾನಿಗೇರಿಸಲಾಗದೆ ಅದು ಮೂಲೆ ಸೇರಬೇಕಾಯಿತು. ಸರ್ವರಿಗೂ ಪ್ರಿಯವಾದ ಗಣೇಶನ ಸುಂದರವಾದ ವದನವನ್ನು ಹೊತ್ತ ಗಾಳಿಪಟವನ್ನು ಹಾರಿಸುವುದರಿಂದ ಧಾರ್ಮಿಕ ಭಾವನೆಗಳಿಗೆ ಅದೆಂತು ಹಾನಿಯಾಗುತ್ತದೆ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲದಿದ್ದರೂ, ‘ನಾವು ಹೇಳಿದ್ದನ್ನು ಪ್ರಶ್ನಿಸದೆಯೇ ಒಪ್ಪಿಕೊಳ್ಳಲೇ ಬೇಕು’ ಎನ್ನುವವರ ಭಯೋತ್ಪಾದನೆಯ ಮುಂದೆ ಗಣರಾಜನೂ ಅಸಹಾಯಕನಾಗಿ ಅಡಗಿಕೊಳ್ಳಬೇಕಾಯಿತು. ದಿನಗಟ್ಟಲೆ ಹಗಲಿರುಳೆನ್ನದೆ ದುಡಿದು, ವಿದೇಶದಿಂದ ತರಿಸಿದ ಬಟ್ಟೆಯನ್ನೂ, ಇತರ ದುಬಾರಿ ಸಾಮಾಗ್ರಿಗಳನ್ನೂ ಬಳಸಿ, ತಮ್ಮ ಕಲಾವಂತಿಕೆಯೆನ್ನೆಲ್ಲ ಧಾರೆಯೆರೆದು ಭಕ್ತಿ-ಪ್ರೀತಿಗಳಿಂದ ರಚಿಸಿದ ಕಲಾಕೃತಿಯನ್ನು ಸಾರ್ವಜನಿಕರೆದುರು ತೆರೆದಿಡಲಾಗದೆ ಟೀಂ ಮಂಗಳೂರಿನ ಕಲಾವಿದರೆಲ್ಲ ಕೈ ಚೆಲ್ಲಬೇಕಾಯಿತು. ಬುದ್ಧಿವಂತರಿಂದ ತುಂಬಿತುಳುಕುತ್ತಿರುವ ದಕ್ಷಿಣ ಕನ್ನಡದಲ್ಲಿ ಇದೊಂದು ಸುದ್ದಿಯೇ ಆಗಲಿಲ್ಲ.

ಗಜರಾಜಆದರೆ ಕಲಾವಿದರ ಕೈಗಳನ್ನು ಕಟ್ಟಿಹಾಕಿದರೂ ಸೃಜನಶೀಲತೆಯನ್ನು ಕಟ್ಟಿಹಾಕಲು ಸಾಧ್ಯವೇ? ಗಣರಾಜನ ರೂಪಾಂತರವಾಯಿತು. ವಕ್ರದಂತವು ಹೋಗಿ ಪೂರ್ಣದಂತವು ಬಂತು, ಗಣೇಶನ ಮುಖವು ಬದಲಾಗಿ ಗಜರಾಜನದಾಯಿತು. ಗುಜರಾತಿನ ಅಹಮದಾಬಾದಿನಲ್ಲಿ ಗಜರಾಜನನ್ನು ಬಾನಿಗೇರಿಸಲಾಯಿತು, ಎಲ್ಲರ ಮೆಚ್ಚುಗೆಯೂ ಬಂತು, ಸ್ವತಃ ಮುಖ್ಯಮಂತ್ರಿ ಮೋದಿಯ ಕೈಗಳಿಂದಲೇ ಬಹುಮಾನವೂ ಸಿಕ್ಕಿತು.
ಈ ಸಾಧನೆಯಿಂದ ಕಲಾವಿದರಿಗೆ ಸಂತೋಷವಾಯಿತೇ ಗೊತ್ತಿಲ್ಲ. ಗುಜರಾತಿನ ಜನತೆಗಾಗಲೀ, ಮುಖ್ಯಮಂತ್ರಿ ಮೋದಿಗಾಗಲೀ ಗಣೇಶನು ರೂಪ ಬದಲಿಸಿ ಗಜರಾಜನಾದ ವೃತ್ತಾಂತದ ಅರಿವಿತ್ತೇ ಎನ್ನುವುದೂ ಗೊತ್ತಿಲ್ಲ. ಅಂತೂ ಸ್ವಯಂಘೋಷಿತ ಧರ್ಮ ಸಂರಕ್ಷಕರ ಭಯೋತ್ಪಾದನೆಯು ಗಣೇಶನ ಸುಂದರ ಕಲಾಕೃತಿಗೇ ಎರವಾಯಿತು.

ಸಂಸ್ಕೃತಿಯ ಭಯೋತ್ಪಾದಕರ ‘ರಕ್ಷಣೆಗೆ’  ಒಳಗಾಗುವ ಎಲ್ಲವುಗಳ ಪಾಡು ಕೂಡಾ ಬಹುಷಃ ಇದೇ ಆಗುತ್ತದೆಯೇನೋ?  ಗಣೇಶನ ಮಾನರಕ್ಷಣೆಯನ್ನು ಮಾಡುತ್ತೇವೆಂದು ಭ್ರಮಿಸಿದವರ ಭಯೋತ್ಪಾದನೆಯಿಂದಾಗಿ ಅವನ ಮಾನ ಉಳಿಯುವುದಿರಲಿ, ಅವನ ಮುಖವೇ ಬದಲಾಗಿ ಗಣೇಶ ಹೋಗಿ ಅದು ಆನೆಯಾಗಬೇಕಾಯಿತು.  ಅವರು ‘ರಕ್ಷಿಸಲು’ ಹೊರಟಿದ್ದ ರಾಮ ಜನ್ಮ ಭೂಮಿಯಲ್ಲಿ ಹದಿನೇಳು ವರ್ಷಗಳಾದರೂ ಶ್ರೀ ರಾಮಚಂದ್ರನ ತಲೆಗೊಂದು ಸೂರಿಲ್ಲದೆ ನರಳಬೇಕಾದ ಸ್ಥಿತಿಯಾಗಿದೆ.  ಮಂಗಳೂರಿನಲ್ಲಿ ಮೊನ್ನೆ ಹುಡುಗಿಯರನ್ನು ಈ ಸಂಸ್ಕೃತಿ ರಕ್ಷಕರು ‘ರಕ್ಷಿಸಿದ’ ರೀತಿಯು ವಿಶ್ವಕ್ಕೇ ತಿಳಿದಿದೆ. ಅವರ ರಕ್ಷಣೆಯಲ್ಲಿರುವ ಹಿಂದೂ ಸಂಸ್ಕೃತಿ ಮತ್ತು ಹಿಂದೂ ಧರ್ಮಗಳ ಗತಿಯೂ ಬೇರೇನಾದೀತು?


ಅರವಿಂದ ಅಡಿಗರ ದಾನ ಸಂಘ ಪರಿವಾರದ ಕೋಮುದ್ವೇಷಕ್ಕೆ ಸರಿಯುತ್ತರ!

ನವೆಂಬರ್ 7, 2008
ಅರವಿಂದ ಅಡಿಗ

ಅರವಿಂದ ಅಡಿಗ

ತನ್ನ ಮೊದಲ ಕೃತಿಯಾದ ದಿ ವೈಟ್ ಟೈಗರ್ ಗೆ ಪ್ರತಿಷ್ಠಿತ ಬುಕರ್ ಪ್ರಶಸ್ತಿಯನ್ನು ಪಡೆದಿರುವ ಲೇಖಕ ಅರವಿಂದ ಅಡಿಗ, ಪ್ರಶಸ್ತಿಯಲ್ಲಿ ಮೂರನೇ ಒಂದರಷ್ಟನ್ನು (ರೂ. 15 ಲಕ್ಷಗಳು) ತಾನು ಕಲಿತ ಶಾಲೆಯಾದ ಮಂಗಳೂರಿನ ಸಂತ ಅಲೋಸಿಯಸ್ ಫ್ರೌಢ ಶಾಲೆಗೆ ದಾನವಾಗಿ ನೀಡಿದ್ದಾರೆ. ತಾನು ಪಡೆದ ಅತ್ಯುತ್ತಮ ಶಿಕ್ಷಣವನ್ನು ಮನಸಾರೆ ಹೊಗಳಿರುವ ಅರವಿಂದ, ಅಲೋಸಿಯಸ್ ಶಿಕ್ಷಣ ಸಂಸ್ಥೆಯು ಊರಿನ ರತ್ನಗಳಲ್ಲೊಂದು ಎಂದು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಬಡವರಾದ ಹಾಗೂ ಅವಕಾಶವಂಚಿತರಾದ ವಿದ್ಯಾರ್ಥಿಗಳಿಗೆ ನೆರವಾಗುವ ಜವಾಬ್ದಾರಿಯನ್ನು ಕಲಿಸಿದ ಫಾ. ವಿಕ್ಟರ್ ಡಿಸೋಜಾ ಅವರ ನೆನಪಲ್ಲಿ ಅಂತಹಾ ವಿದ್ಯಾರ್ಥಿಗಳಿಗೆ ನೆರವನ್ನೀಯಲು ಈ ಹಣವನ್ನು ಬಳಸಬೇಕೆಂದೂ ಅವರು ಕೋರಿದ್ದಾರೆ. [1, 2, 3, 4]

ಶತಮಾನಕ್ಕೂ ಹೆಚ್ಚು ಕಾಲದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವಿದ್ಯಾಭ್ಯಾಸವನ್ನು ನೀಡುವ ಜೊತೆಗೆ ಅದೆಂತಹಾ ಜೀವನ ಮೌಲ್ಯಗಳನ್ನೂ, ಆದರ್ಶಗಳನ್ನೂ ಆ ಶಾಲೆ ಕಲಿಸಿಕೊಟ್ಟಿದೆಯೆನ್ನುವುದಕ್ಕೆ ಅರವಿಂದ ಅಡಿಗರ ಕೃತಜ್ಞತಾಪೂರ್ವಕ ಮಾತುಗಳೇ ಸಾಕ್ಷಿ. ಕ್ರಿಶ್ಚಿಯನ್ ಶಾಲೆಗಳಲ್ಲೆಲ್ಲ ಮತಾಂತರದ ಕೆಲಸಗಳೇ ನಡೆಯುತ್ತವೆಯೆಂದು ಬೊಬ್ಬಿರಿಯುತ್ತಿರುವ ಸಂಘಪರಿವಾರದವರಿಗೆ ಇದು ದಿಟ್ಟವಾದ ಉತ್ತರವೆನ್ನುವುದು ನನ್ನ ಅನಿಸಿಕೆ.  ಇದೇ ಅಲೋಸಿಯಸ್ ಶಾಲೆಗಳೆದುರು ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದ ಸಂಘ ಪರಿವಾರದವರು, ಇನ್ನು ಮುಂದೆ ಕ್ರಿಶ್ಚಿಯನ್ ಶಾಲೆಗಳಿಗೆ ಹಿಂದೂ ವಿದ್ಯಾರ್ಥಿಗಳು ಸೇರದಂತೆ ನೋಡಿಕೊಳ್ಳುವುದಾಗಿ ಹೂಂಕರಿಸಿದ್ದರು. ಮತಾಂತರ ಮಾಡುವುದರಲ್ಲಿ ಅಲೋಸಿಯಸ್ ಶಾಲೆಯ ಕೊಡುಗೆ ಅಪಾರವೆಂದು ನನಗೆ ಬೋಧಿಸಲು ಕೆಲ ವರ್ಷಗಳ ಹಿಂದೆ ಬಂದಿದ್ದ ಮಾಜಿ ಶಾಸಕರೊಬ್ಬರಿಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹಲವು ಮಂದಿ ಆ ಕಾಲದಲ್ಲೂ ಅಲೋಸಿಯಸ್ ಶಾಲೆಗಳಲ್ಲೇ ಯಾವುದೇ ತೊಂದರೆಗಳನ್ನು ಅನುಭವಿಸದೆಯೇ ಕಲಿತಿದ್ದರೆನ್ನುವುದನ್ನು ನಾನು ನೆನಪಿಸಬೇಕಾಯಿತು. ಸಂಘ ಪರಿವಾರದ ಇಂತಹಾ ಸುಳ್ಳು ಪ್ರಚಾರಗಳಿಗೆ ಅರವಿಂದರ ಕ್ರಮವು ಸೂಕ್ತವಾದ ಉತ್ತರವೇ ಆಗಿದೆ.

ಭಾರತವನ್ನು ಬೈದದ್ದಕ್ಕೇ ಅರವಿಂದರ ಕೃತಿಗೆ ಬುಕರ್ ಪ್ರಶಸ್ತಿ ಬಂದಿದೆಯೆಂದು ವಿಮರ್ಶಿಸುವ ಈ ಮಂದಿ ಅವರ ಈ ಕ್ರಮಕ್ಕೆ ಏನನ್ನುತ್ತಾರೋ ಕಾದು ನೋಡೋಣ!


ದಕ್ಷಿಣ ಕನ್ನಡದಲ್ಲಿ ಮತೀಯ ಭಯೋತ್ಪಾದನೆ

ಸೆಪ್ಟೆಂಬರ್ 16, 2008

ದಿಲ್ಲಿಯಲ್ಲಿ ಸರಣಿ ದಾಳಿ

ಮಂಗಳೂರಿನಲ್ಲಿ ಸರಣಿ ದಾಳಿ

ದಿಲ್ಲಿಯಲ್ಲಿ ಸರಣಿ ಬಾಂಬ್ ಸ್ಫೋಟಗೊಂಡ ಮರುದಿನವೇ ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಚರ್ಚುಗಳು ಮತ್ತಿತರ ಪ್ರಾರ್ಥನಾ ಮಂದಿರಗಳ ಮೇಲೆ ಪೂರ್ವಯೋಜಿತವಾದ ಸರಣಿ ದಾಳಿಗಳು ನಡೆದವು. ಮತಾಂತರಕ್ಕೆ ಕುಮ್ಮಕ್ಕು ನೀಡುವುದನ್ನು ವಿರೋಧಿಸಿ ತವೇ ಈ ದಾಳಿಗಳನ್ನು ನಡೆಸಿದೆವೆಂದು ರಾಜ್ಯದ ಆಡಳಿತ ಪಕ್ಷದ ಅಂಗ ಸಂಸ್ಥೆಗಳಾದ ಬಜರಂಗ ದಳ ಹಾಗೂ ವಿಹಿಂಪಗಳು ಘೋಷಿಸುತ್ತಿದ್ದಂತೆ ಇದೆಲ್ಲಾ ಸರಕಾರಕ್ಕೆ ಅಪಕೀರ್ತಿ ತರಲು ವಿರೋಧ ಪಕ್ಷದವರ ಪಿತೂರಿಯೆಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು. ರಾಜ್ಯದ ಜನತೆಯ ಪ್ರಾಣ ಹಾಗೂ ಆಸ್ತಿ-ಪಾಸ್ತಿಗಳನ್ನು ರಾಗ=ದ್ವೇಷಗಳಿಲ್ಲದೆ ರಕ್ಷಿಸುವುದಾಗಿ ಪ್ರತಿಜ್ಞೆಗೈದು ಅಧಿಕಾರಕ್ಕೇರಿದ ಗೃಹ ಮಂತ್ರಿಯು ದಾಳಿಕೋರರ ಮೇಲೆ ಕ್ರಮ ಕೈಗೊಳ್ಳುವ ಬದಲಾಗಿ ಮತಾಂತರವನ್ನು ನಿಲ್ಲಿಸಬೇಕೆಂದು ಅಪ್ಪಣೆ ಕೊಟ್ಟರು. ಇನ್ನೊಂದೆಡೆ, ತಾನೋರ್ವ ಕ್ರಿಶ್ಚಿಯನ್ನಳಾಗಿ ಮಾತನಾಡುತ್ತಿದ್ದೇನೆಂದು ಹೇಳಿಕೊಂಡ ಕಾಂಗ್ರೆಸ್ ನಾಯಕಿಯೊಬ್ಬರು, ಸ್ವ-ರಕ್ಷಣಗಾಗಿ ಕ್ರಿಶ್ಚಿಯನ್ ಯುವಕರ ದಳಗಳನ್ನು ರಚಿಸಲಾಗಿದೆಯೆಂದು ಹೇಳಿಕೊಂಡರು. ಅಲ್ಲಲ್ಲಿ ದಾಳಿಗಳು, ಇರಿತಗಳು, ದೊಂಬಿಗಳು ನಡೆದವು. ಲೋಕಸಭಾ ಚುನಾವಣೆಯು ಸಮೀಪಿಸುತ್ತಿರುವಂತೆ ಮತಾಂಧ ಶಕ್ತಿಗಳ ನಡುವಿನ ಜಟಾಪಟಿಯ ಮಧ್ಯೆ ಸಿಕ್ಕಿ ಮಂಗಳೂರು ಮತ್ತೊಮ್ಮೆ ನಲುಗುತ್ತಿದೆ.

ನೋಡಿ:

Situation grim in Mangalore
Situation grim in Mangalore

Karnataka churches vandalised
Karnataka churches vandalised

Karnataka CM visits violence-hit Mangalore
Karnataka CM visits violence-hit Mangalore

ಮಾನ್ಯ ಗೃಹ ಮಂತ್ರಿಗಳ ಸ್ವಂತ ಬ್ಲಾಗ್ ನೋಡಿ:

http://drvsacharya.blogspot.com/

ಅವರ ಮನದಾಳದ ಮಾತುಗಳು ಕೆಂಪು ಬಣ್ಣದಲ್ಲಿವೆ!

ತಾವು ಸ್ವತಃ ಗಲಭೆ ಪೀಡಿತ ಪ್ರದೇಶಗಳನ್ನು ತಲುಪಿದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತೆಂದು ಅವರೇ ಹೇಳಿಕೊಂಡಿದ್ದಾರೆ! ವಾ! ಕರ್ನಾಟಕದ ಜನ ಧನ್ಯರು! ಪ್ರತಿಯೊಂದು ಕಡೆ ತೊಂದರೆಗಳಾದಾಗಲೂ ತಾವು ಅಲ್ಲಿಗೆ ತಲುಪಿದ ಮೇಲಷ್ಟೇ ಪೋಲೀಸರು ಕ್ರಮ ಕೈಗೊಳ್ಳಲಿ! ಉಡುಪಿಗೊಂದು ವಿಮಾನ ನಿಲ್ದಾಣ ಬೇಗನೇ ಬರಲಿ!


ಗಾಳಿಪಟಕ್ಕೂ ಬಂತು ಕುತ್ತು!

ಸೆಪ್ಟೆಂಬರ್ 3, 2008

ಕರಾವಳಿ ಕರ್ನಾಟಕದಲ್ಲಿ ಯಾವ ಶಾಲೆಗಳಲ್ಲಿ ಮಕ್ಕಳು ಕಲಿಯಬೇಕು, ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬೇಕು, ಯಾವ ಚಲನಚಿತ್ರವನ್ನು ನೋಡಬೇಕು, ವಯಸ್ಸಿಗೆ ಬಂದ ಯುವಕ-ಯುವತಿಯರು ಯಾರ ಜೊತೆ ಹರಟಬೇಕು, ಅಷ್ಟೇ ಅಲ್ಲ, ಯಾವ ಗಾಳಿಪಟವನ್ನು ಆಗಸದಲ್ಲಿ ಹಾರಿಸಬೇಕು ಎನ್ನುವುದನ್ನೆಲ್ಲ ಬೆರಳೆಣಿಕೆಯಷ್ಟಿರುವ ಕೆಲವರು ನಿರ್ಧರಿಸುವಂತಾಗಿಬಿಟ್ಟಿದೆ. ಇದು ಉತ್ಪ್ರೇಕ್ಷೆಯೇನಲ್ಲ. ಒರಿಸ್ಸಾದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ವಿರೋಧಿಸಿ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳು ಘೋಷಿಸಿದ್ದ ಒಂದು ದಿನದ ರಜೆ, ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಮಂಗಳೂರಿನ ತಂಡದವರಿಂದ ಗಣೇಶನ ಮುಖದ ಚಿತ್ರವುಳ್ಳ ಗಾಳಿಪಟದ ತಯಾರಿ ಹಾಗೂ ನಗರದ ಫಾ. ಮುಲ್ಲರ್ಸ್ ಆಸ್ಪತ್ರೆಯಲ್ಲಿ ಹದಿಹರೆಯದ ಯುವತಿಯೊಬ್ಬಳ ಅಕಾಲಿಕ ಸಾವು ಮುಂತಾದ ವಿಚಾರಗಳಿಗೆ ಕಳೆದೊಂದು ವಾರದಲ್ಲಿ ಮಂಗಳೂರಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ನಮ್ಮ ಮೌನದ ಗಂಭೀರ ಪರಿಣಾಮಗಳನ್ನು ನಾವು ಅನುಭವಿಸಬೇಕಾದ ಅನಿವಾರ್ಯತೆಗೆ ಇವು ದಿಕ್ಸೂಚಿಯಾಗಿವೆ.

ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳು ರಜೆ ಘೋಷಿಸಿದ ಬೆನ್ನಿಗೆ ಕೆಲವು ಮೂಲಭೂತವಾದಿ ಸಂಘಟನೆಗಳಿಂದ ವಿಷಪೂರಿತವಾದ ಹೇಳಿಕೆಗಳು ಹೊರಬಿದ್ದವು ಹಾಗೂ ಕೆಲವು ಹೆಸರಾಂತ ಸಂಸ್ಥೆಗಳೆದುರು ಪ್ರತಿಭಟನಾ ಪ್ರದರ್ಶನಗಳೂ ನಡೆದವು. ಅಂತಹಾ ಶಾಲೆಗಳನ್ನು ಕೂಡಲೇ ಮುಚ್ಚಬೇಕು, ಹಿಂದೂಗಳು ಕ್ರಿಶ್ಚಿಯನರು ನಡೆಸುವ ಶಾಲೆಗಳನ್ನು ಬಹಿಷ್ಕರಿಸಬೇಕು ಎಂದೆಲ್ಲಾ ಕೆಲವರು ಬೊಬ್ಬಿರಿದರೆ, ಕ್ರಿಶ್ಚಿಯನರು ನಡೆಸುವ ಶಾಲೆಗಳಿಗೆ ಹಿಂದೂಗಳು ತಮ್ಮ ಮಕ್ಕಳನ್ನು ಸೇರಿಸದಂತೆ ಒತ್ತಾಯಿಸಲು ಅಭಿಯಾನವನ್ನು ನಡೆಸುವುದಾಗಿ ಇನ್ನು ಕೆಲವರು ಬೆದರಿಕೆಯೊಡ್ಡಿದರು. ರಾಜ್ಯದ ಶಿಕ್ಷಣ ಸಚಿವರು ಕೂಡಾ ತಮ್ಮ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು, ಏಕಪಕ್ಷೀಯವಾಗಿ, ಪೂರ್ವಾನುಮತಿಯಿಲ್ಲದೆಯೇ ರಜೆ ಸಾರಿದ್ದೇಕೆಂದು ಈ ಸಂಸ್ಥೆಗಳಿಂದ ಕಾರಣ ಕೇಳಿಯೇಬಿಟ್ಟರು. ಆದರೆ ಇದಕ್ಕೆ ಒಂದೆರಡು ದಿನಗಳಿಗೆ ಮೊದಲು, ಅಮರನಾಥದ ಭೂ ವಿವಾದವನ್ನು ಪ್ರತಿಭಟಿಸಿ ಅ.ಭಾ.ವಿ.ಪ.ದ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನೆಲ್ಲ ಶಾಲೆ-ಕಾಲೇಜುಗಳಿಂದ ಹೊರತಂದು, ನಗರದ ಮುಖ್ಯ ಬೀದಿಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿ ರಸ್ತೆಸಂಚಾರಕ್ಕೆ ಅಡ್ಡಿಯುಂಟುಮಾಡಿದ್ದನ್ನೂ, ಇವನ್ನೆಲ್ಲ ಪೋಲೀಸರು ಮೂಕಪ್ರೇಕ್ಷಕರಾಗಿ ನೋಡಿದ್ದನ್ನೂ ಊರ ಜನ ಕಣ್ಣಾರೆ ಕಂಡಿದ್ದರೂ, ಅದು ಶಿಕ್ಷಣ ಸಚಿವರ ಗಮನಕ್ಕೆ ಬಂದಿಲ್ಲವೇನೋ? ಇನ್ನೊಂದೆಡೆ ಆಡಳಿತ ಪಕ್ಷದ ಹಲವಾರು ನಾಯಕರುಗಳೂ, ಶಾಸಕರುಗಳೂ, ಹಾಲಿ ಹಾಗೂ ಮಾಜಿ ಸಚಿವರುಗಳೂ (ಮತ್ತವರ ಮಕ್ಕಳುಗಳೂ) ಕ್ರಿಶ್ಚಿಯನ್ ವಿದ್ಯಾಸಂಸ್ಥೆಗಳಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಪಡೆದಿರುವ ಸತ್ಯವು ಎಲ್ಲರಿಗೂ ತಿಳಿದಿಲ್ಲವೆ? ಉನ್ನತ ಗುಣಮಟ್ಟದ ವಿದ್ಯಭ್ಯಾಸಕ್ಕೆ ಹೆಸರಾಗಿರುವ ಮಂಗಳೂರಿನಲ್ಲಿ ಈ ಮೂಲಭೂತವಾದಿ ಸಂಘಟನೆಗಳು ನಡೆಸುತ್ತಿರುವ, ಒಳ್ಳೆಯ ಹೆಸರು ಪಡೆದಿರುವ, ಶಾಲೆಯನ್ನೇನಾದರೂ ಹುಡುಕಿದರೆ ಸಿಗುವುದು ಕಷ್ಟವೇ ಸರಿ. ಇಬ್ಬಗೆ ನೀತಿಗೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದು ಬೇಕೇ?

ಟೀಂ ಮಂಗಳೂರು ಎಂಬ ಹೆಸರಿನ ತಂಡವನ್ನು ಕಟ್ಟಿರುವ ನಮ್ಮೂರ ಕೆಲ ಯುವಕರು ಗಾಳಿಪಟಗಳನ್ನು ತಯಾರಿಸಿ ಹಾರಿಸುವ ಕಲಾತ್ಮಕವಾದ ಕ್ರೀಡೆಯನ್ನು ಈಗ ಕೆಲ ವರ್ಷಗಳಿಂದ ನಗರದಲ್ಲಿ ಜನಪ್ರಿಯಗೊಳಿಸಲು ಶ್ರಮಿಸುತ್ತಿದ್ದಾರೆ. ಪ್ರತಿವರ್ಷವೂ ಅವರು ಸಂಘಟಿಸುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಆನಂದಿಸಲು ಪಣಂಬೂರಿನ ಕಡಲಕಿನಾರೆಯಲ್ಲಿ ಜಾತಿ-ಮತ ಬೇಧವಿಲ್ಲದೆ ಲಕ್ಷಗಟ್ಟಲೆ ಜನ ನೆರೆಯುತ್ತಾರೆ, ಅವರ ಅದಮ್ಯವಾದ ಉತ್ಸಾಹಕ್ಕೆ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯೂ ದೊರೆತಿದೆ. ತಂಡದವರು ತಯಾರಿಸಿದ ನಮ್ಮ ದೇಶದ ವರ್ಣರಂಜಿತ ಸಂಸ್ಕೃತಿಯನ್ನು ಬಿಂಬಿಸುವ ಗಾಳಿಪಟಗಳು ಹಲವಾರು ಪ್ರಶಸ್ತಿಗಳನ್ನೂ ಪಡೆದಿವೆ. ಇಅದೇ ಸೆಪ್ಟೆಂಬರ್ 5ರಿಂದ 14ರವರೆಗೆ ಫ್ರಾನ್ಸಿನ ತೀಪೆಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಹಾರಿಸಲಿಕ್ಕೆಂದು ಗಣೇಶನ ಮುಖದಾಕೃತಿಯ ಸುಂದರವಾದ ಗಾಳಿಪಟವೊಂದನ್ನು ತಂಡದವರು ತಯಾರಿಸಿ, ಆಗಸ್ಟ್ ಕೊನೆಯ ವಾರದಲ್ಲಿ ಅದನ್ನು ಪಣಂಬೂರಿನ ಕಡಲ ಕಿನಾರೆಯಲ್ಲಿ ಪರೀಕ್ಷಾರ್ಥವಾಗಿ ಹಾರಿಸಲು ಯೋಜನೆಗಳನ್ನು ಹಾಕಿಕೊಂಡಿದ್ದರು. ಆದರೆ ‘ಹಿಂದೂ ದೇವರುಗಳ ಮಾನವನ್ನು ರಕ್ಷಿಸುವುದಾಗಿ’ ಹೇಳಿಕೊಳ್ಳುವ ಸಂಘಟನೆಯೊಂದು ಈ ಪ್ರಯತ್ನಗಳಿಗೆ ಅಡ್ಡಗಾಲು ಹಾಕಿತು; ಅಂತಹಾ ಗಾಳಿಪಟವನ್ನು ಹಾರಿಸುವುದರಿಂದ ‘ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆಯೆಂದೂ’, ಈ ಕಾರಣಕ್ಕಾಗಿ ಗಾಳಿಪಟವನ್ನು ಮಂಗಳೂರಷ್ಟೇ ಅಲ್ಲ, ಜಗತ್ತಿನ ಯಾವ ಭಾಗದಲ್ಲೂ ಹಾರಿಸಬಾರದೆಂದೂ, ಹಾರಿಸಿದರೆ ಪರಿಸ್ಥಿತಿಯು ನೆಟ್ಟಗಿರುವುದಿಲ್ಲವೆಂದೂ ಬೆದರಿಸಲಾಯಿತು. ಸಮಸ್ತ ಹಿಂದೂ ಧರ್ಮೀಯರ ವಕ್ತಾರರಾಗಿ ಇವರನ್ನಾರು ನೇಮಕಮಾಡಿದರೆನ್ನುವುದಾಗಲೀ, ಇವರು ಒಂದಿಬ್ಬರ ‘ಭಾವನೆಗಳಿಗೆ ನೋವಾದರೆ’ ಸಮಸ್ತ ಹಿಂದೂಗಳ ಭಾವನೆಗಳೂ ಅವೇ ಹೇಗಾಗುತ್ತವೆಯೆನ್ನುವುದಾಗಲೀ, ಒಂದಿಬ್ಬರಿಗೆ ಆ ಗಾಳಿಪಟವನ್ನು ನೋಡುವ ಇಷ್ಟವಿಲ್ಲದಿದ್ದರೆ ದಕ್ಷಿಣ ಕನ್ನಡದ ಸಮಸ್ತ ಜನತೆಯೂ ಆ ಸುಂದರವಾದ ಕಲಾಕೌಶಲ್ಯವನ್ನು ಕಂಡು ಆನಂದಿಸುವ ಅವಕಾಶದಿಂದ ಯಾಕೆ ವಂಚಿತರಾಗಬೇಕೆನ್ನುವುದಾಗಲೀ ಸ್ಪಷ್ಟವಿಲ್ಲ. ಅಷ್ಟೇ ಅಲ್ಲ, ಗಾಳಿಪಟದಲ್ಲಿ ಗಣೇಶನ ಮುಖವನ್ನು ಬಿಂಬಿಸುವುದರಿಂದ ಗಣೇಶನ ಅವಹೇಳನ ಮತ್ತು ಹಿಂದೂಗಳ ಅಪಮಾನ ಹೇಗಾಗುತ್ತದೆಯೆನ್ನುವುದಕ್ಕೆ ಮೂರು ಸದಸ್ಯರ ಸಂಘಟನೆಯ ವಕ್ತಾರನಲ್ಲಿ ಉತ್ತರವೂ ಲಭ್ಯವಿಲ್ಲ.(ಗಾಳಿಪಟ ತಯಾರಿಸಿದವರೆಲ್ಲರೂ ಹಿಂದೂ ಧರ್ಮೀಯರೇ ಆಗಿದ್ದಾರೆನ್ನುವುದೂ ಇನ್ನೊಂದು ವಿಪರ್ಯಾಸ!) ಕೆಲ ತಿಂಗಳ ಹಿಂದೆ ನಗರದ ಚಿತ್ರಮಂದಿರದಲ್ಲಿ ಜೋಧಾ ಅಕ್ಬರ್ ಚಿತ್ರದ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದ ಇದೇ ಸಂಘಟನೆಯು ಬಹುಷಃ ಅದರ ಯಶಸ್ಸಿನಿಂದ ಇನ್ನಷ್ಟು ಆತ್ಮಬಲವನ್ನು ಪಡೆದಿರಬೇಕು. ನಮ್ಮ ಮೌನದ ಪರಿಣಾಮವದು.

ಬರೇ ನಮ್ಮ ಮೌನವಷ್ಟೇ ಅಲ್ಲ, ಕಾನೂನು ಪಾಲಕರ ನಿಷ್ಕ್ರಿಯತೆಯೂ ಈ ಶಕ್ತಿಗಳಿಗೆ ಇನ್ನಷ್ಟು ಬಲವನ್ನು ತುಂಬಿವೆ, ಕಂಡಕಂಡಲ್ಲಿ, ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ ಕಾನೂನನ್ನೇ ತಮ್ಮ ಕೈಯೊಳಕ್ಕೆ ತೆಗೆದುಕೊಳ್ಳಲು ಸ್ಫೂರ್ತಿಯಾಗಿವೆ (ಕಾನೂನು ಪಾಲಕರೂ ಇವರೊಂದಿಗೆ ಕೈಜೋಡಿಸಿರುವ ನಿದರ್ಶನಗಳೂ ಇಲ್ಲದಿಲ್ಲ). ಪಚ್ಚನಾಡಿಯ ಪ್ರಾರ್ಥನಾ ಸ್ಥಳವೊಂದರ ಮೇಲೆ ದಾಳಿ, ಜೊತೆಗೂಡಿ ಹರಟೆ ಹೊಡೆಯುತ್ತಾ ಕುಳಿತಿರುವ ವಯಸ್ಸಿಗೆ ಬಂದ ಗಂಡು-ಹೆಣ್ಣುಗಳ ಮೇಲೆ ದಾಳಿ ಇವೇ ಮುಂತಾದುವೆಲ್ಲಾ ಇದಕ್ಕೆ ಉದಾಹರಣೆಗಳು. ಈ ದಾಳಿಗಳನ್ನು ನಡೆಸುವವರು ಕಾನೂನಿಗೆ ಅತೀತರಾಗಿರುವುದರಿಂದ ಇಂತಹಾ ದಾಳಿಗಳು ಎಗ್ಗಿಲ್ಲದೆ ಮುಂದುವರಿಯುತ್ತಿವೆ. ಫಾ. ಮುಲ್ಲರ್ಸ್ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸೀಮೆ ಎಣ್ಣೆಯನ್ನು ಸೇವಿಸಿದ್ದ ಹುಡುಗಿಯೊಬ್ಬಳು ಸಾವನ್ನಪ್ಪಿದಾಗ ಇದೇ ಶಕ್ತಿಗಳು ದಾಂಧಲೆ ನಡೆಸಿ ಕರ್ತವ್ಯನಿರತರಾಗಿದ್ದ ವೈದ್ಯರ ಮೇಲೂ, ಗರ್ಭಿಣಿ ದಾದಿಯ ಮೇಲೂ ಹಲ್ಲೆ ನಡೆಸಿ, ಪೀಠೋಪಕರಣಗಳನ್ನೂ, ಗಣಕಯಂತ್ರವನ್ನೂ ನಾಶಪಡಿಸಿ, ರಸ್ತೆಯಲ್ಲಿ ಹೆಣವನ್ನಿಟ್ಟು ಪ್ರತಿಭಟಿಸುವ ಧೈರ್ಯವನ್ನು ತೋರಬಲ್ಲವಾದರೆ, ನಮ್ಮ ಮೌನ ಅತಿಯಾಯಿತೆಂದು ಅನಿಸುವುದಿಲ್ಲವೇ?

ಸ್ವಚ್ಛಂದವಾಗಿ ಬಾನಲ್ಲಿ ಹಾರಾಡುವ ಗಾಳಿಪಟಕ್ಕೇ ಕರಾವಳಿ ಕರ್ನಾಟಕದಲ್ಲೀಗ ಸ್ವಾತಂತ್ರ್ಯವಿಲ್ಲ.